ADVERTISEMENT

ಹನಿಟ್ರ್ಯಾಪ್ ಪ್ರಕರಣ| ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 6:54 IST
Last Updated 21 ಮಾರ್ಚ್ 2025, 6:54 IST
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ    

ನವದೆಹಲಿ: ಹನಿಟ್ರ್ಯಾಪ್ ಪ್ರಕರಣ ಇಡೀ ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ. ರಾಜ್ಯದಲ್ಲಿ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ. ಈ ಪ್ರಕರಣ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.‌

ಈ ಕುರಿತು ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷ ಆಡಳಿತವನ್ನು ನೈತಿಕ ಅಧಪತನಕ್ಕೆ ತೆಗೆದುಕೊಂಡು ಹೋಗಿದೆ. ಈ ಸರ್ಕಾರದ ಅವಧಿಯಲ್ಲಿ ಎರಡು ವರ್ಷದಲ್ಲಿ ಸುಮಾರು ಹತ್ತು ಹಗರಣಗಳು ಹೊರಗೆ ಬಂದಿವೆ. ಎಲ್ಲಿ ಕೈ ಹಾಕಿದರೂ ಅಲ್ಲಿ ಹಗರಣ ಸಿಗುತ್ತವೆ. ಹೀಗಾಗಿ ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡುತ್ತಿದ್ದೇವೆ‌.

ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು‌ ಈಗ ಹನಿ ಕ್ರೈಸಿಸ್ ಶುರುವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿಯೂ ದಿವಾಳಿಯಾಗಿದೆ. ನೈತಿಕವಾಗಿಯೂ ದಿವಾಳಿಯಾಗಿದೆ. ಒಬ್ಬ ಸಂಪುಟ ಸಚಿವರು ವಿಧಾನಸಭೆಯಲ್ಲಿ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿಧಾನಸಭೆಯ ಮೊಗಸಾಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಸುಮ್ಮನೆ ನೋಡುತ್ತ ಕೂತಿದ್ದಾರೆ. ಇವತ್ತು ಅದು ಸ್ಪೋಟಗೊಂಡಿದೆ. ಸಚಿವ ಸಂಪುಟದಲ್ಲಿಯೇ ಈ ರೀತಿ ನಡೆಯುತ್ತಿರುವಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು. ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ ಎಂದು ಹೇಳಿದರು.

ADVERTISEMENT

ನನ್ನ ಪ್ರಕಾರ ಈ ಅನೈತಿಕ ಚಟುವಟಿಕೆ ಮುಖ್ಯಮಂತ್ರಿಯವರ ಮೂಗಿನ ನೇರಕ್ಕೆ ನಡೆಯುತ್ತಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಇಲ್ಲದಿದ್ದರೆ ರಾಜ್ಯದ ಜನತೆ ಯಾಕಾದರೂ ಇಂತಹ ಸರ್ಕಾರ ಅಧಿಕಾರಕ್ಕೆ ತಂದಿದ್ದೇವೆ ಎಂದು ಪಶ್ಚಾತಾಪ ಪಡುವಂತಾಗುತ್ತದೆ ಎಂದು ಹೇಳಿದರು.

ಸಹಕಾರ ಸಚಿವರು 48 ಜನರ ಸಿಡಿಗಳಿವೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ ಅವರಿಗೆ ಈ ಬಗ್ಗೆ ಇನ್ನೂ ಹೆಚ್ಚಿ ಮಾಹಿತಿ ಇರಬಹುದು ಅವರು ಅದೆಲ್ಲವನ್ನೂ ತನಿಖೆಗೆ ಒಪ್ಪಿಸಬೇಕು. ಈ ರೀತಿಯ ಅನೈತಿಕ ಚಟುವಟಿಕೆಗಳನ್ನು ಮಾಡುವ ಯಾವುದೇ ಪಕ್ಷದ ವ್ಯಕ್ತಿ ಇರಲಿ ಅವರ ವಿರುದ್ದ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಈ ಪ್ರಕರಣದ ಬಗ್ಗೆ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವುದರಿಂದ ಕೇಂದ್ರದ ನಾಯಕರ ಗಮನಕ್ಕೂ ಬಂದಿರುತ್ತದೆ. ಈ ಪ್ರಕರಣದ ತನಿಖೆಯ ಹಾದಿಯ ನಂತರ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.