ADVERTISEMENT

ಇಂದಿನಿಂದ ‘ರಾಷ್ಟ್ರೀಯ ತೋಟಗಾರಿಕೆ ಮೇಳ’

ರೈತರನ್ನು ಸ್ವಾಗತಿಸಲು ಸಜ್ಜಾದ ಹೆಸರಘಟ್ಟದ ಐಐಎಚ್ಆರ್ ಆವರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 19:55 IST
Last Updated 7 ಫೆಬ್ರುವರಿ 2021, 19:55 IST
‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕಾಗಿ ಐಐಎಚ್‌ಆರ್ ಆವರಣದಲ್ಲಿ ಸಿದ್ಧಗೊಂಡಿರುವ ನೂತನ ತಳಿಗಳ ಪ್ರಾತ್ಯಕ್ಷಿಕೆಗಳು
‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕಾಗಿ ಐಐಎಚ್‌ಆರ್ ಆವರಣದಲ್ಲಿ ಸಿದ್ಧಗೊಂಡಿರುವ ನೂತನ ತಳಿಗಳ ಪ್ರಾತ್ಯಕ್ಷಿಕೆಗಳು   

ಬೆಂಗಳೂರು: ರೈತರಿಗೆ ತೋಟಗಾರಿಕೆ ಬೆಳೆಗಳ ನೂತನ ತಂತ್ರಜ್ಞಾನಗಳು ಹಾಗೂ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹೆಸರಘಟ್ಟದಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಆಯೋಜಿಸಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ.

ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್‌ ಚೌಧರಿ ಅವರು ಬೆಳಿಗ್ಗೆ 11 ಗಂಟೆಗೆ ಮೇಳವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ.ರೈತರಿಗೆ ಬೆಲೆ ಮಾಹಿತಿ ಒದಗಿಸುವ ಉದ್ದೇಶದಿಂದ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಅರ್ಕಾ ವ್ಯಾಪಾರ್’ ಮೊಬೈಲ್ ಆ್ಯಪ್‌ಗೂ ಚಾಲನೆ ನೀಡಲಿದ್ದಾರೆ.

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಐಸಿಎಆರ್‌ ಸಂಸ್ಥೆಯ ಎ.ಕೆ.ಸಿಂಗ್ ಹಾಗೂ ತ್ರಿಲೋಚನ್ ಮಹಾಪಾತ್ರ, ಐಐಎಚ್‌ಆರ್‌ ನಿರ್ದೇಶಕ ಎಂ.ಆರ್.ದಿನೇಶ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ADVERTISEMENT

ಕೊರೊನಾ ಕಾರಣದಿಂದ ಈ ಬಾರಿ ಭೌತಿಕ ಹಾಗೂ ಆನ್‌ಲೈನ್‌ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭೌತಿಕವಾಗಿ ಹೆಚ್ಚು ಜನರು ಸೇರುವುದನ್ನು ತಡೆಯಲು ಮೇಳಕ್ಕೆ ಬರುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆಸಂಸ್ಥೆ ಸೂಚಿಸಿದೆ. ಮೇಳಕ್ಕೆ ಪ್ರತಿದಿನ ಆರು ಸಾವಿರ ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದೆ.

ಮೇಳದಲ್ಲಿ ಭೌತಿಕವಾಗಿ ಭಾಗವಹಿಸುವ ರೈತರಿಗೆ ವಿಜ್ಞಾನಿಗಳು ತೋಟದಲ್ಲೇ ವಿವರಗಳನ್ನು ನೀಡಲಿದ್ದಾರೆ. ದೇಶದ ಇತರೆ ರಾಜ್ಯಗಳಿಂದ ಆನ್‌ಲೈನ್‌ ಮೂಲಕ ಭಾಗವಹಿಸುವ ರೈತರಿಗೆ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ವೀಕ್ಷಣೆ ವ್ಯವಸ್ಥೆ ಇದೆ. ರೈತರು ತಮ್ಮದೇ ಭಾಷೆಯಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಹನ ನಡೆಸುವ ವ್ಯವಸ್ಥೆಯೂ ಇದೆ.

ಮೇಳದಲ್ಲಿ ವಿಶೇಷತೆಗಳು: ಸಮಗ್ರ ತೋಟಗಾರಿಕೆ ಪದ್ಧತಿ, ಮಣ್ಣುರಹಿತ ಕೃಷಿ ವಿಧಾನ, ಟೆರೇಸ್ ಗಾರ್ಡನಿಂಗ್, ಹೊಸ ತಂತ್ರಜ್ಞಾನಗಳ ಪರಿಚಯ, ರೈತರ ಮನೆ ಬಾಗಿಲಿಗೆ ಬೀಜ ಪೂರೈಸುವ ‘ಸೀಡ್ ಪೋರ್ಟಲ್’,ನಗರ ಕೃಷಿಕರಿಗಾಗಿ ಹೈಡ್ರೋಪಾನಿಕ್ಸ್ ವಿಧಾನದಲ್ಲಿ ತರಕಾರಿ, ಹೂವು ಬೆಳೆಯುವ ಬಗ್ಗೆ ತರಬೇತಿ, ಕಡಿಮೆ ಶ್ರಮ ಹಾಗೂ ಹೆಚ್ಚು ಇಳುವರಿ ನೀಡುವಂತಹ ಹೂವು, ಹಣ್ಣು, ತರಕಾರಿ ಹೊಸ ತಳಿಗಳ ಪ್ರಾತ್ಯಕ್ಷಿಕೆಗಳು ಸಂಸ್ಥೆಯ ಆವರಣದಲ್ಲಿ ಸಜ್ಜುಗೊಂಡಿವೆ.

ಮೇಳಕ್ಕೆ ಭೇಟಿ ನೀಡಲು ಇಚ್ಛಿಸುವವರುhttps://nhf2021.iihr.res.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮೇಳದ ನೇರಪ್ರಸಾರವನ್ನುhttps://www.facebook.com/events/610609993112714 ಮೂಲಕ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.