ADVERTISEMENT

ಪರಿಷತ್‌ ಗದ್ದಲ: ಸಭಾಪತಿಗೆ ಪತ್ರ ಬರೆದ ಪರಿಷತ್‌ ಆಯನೂರು ಮಂಜುನಾಥ್

ಸದನ ಸಮಿತಿ ನಿಯಮಬಾಹಿರ, ಏಕಪಕ್ಷೀಯ– ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 8:17 IST
Last Updated 7 ಜನವರಿ 2021, 8:17 IST
   

ಬೆಂಗಳೂರು: ‘ಡಿ. 15ರಂದು ವಿಧಾನ ಪರಿಷತ್‌ನಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸದನ ಸಮಿತಿ ರಚಿಸುವ ವೇಳೆ ನಿಯಮಬಾಹಿರ ಹಾಗೂ ಏಕಪಕ್ಷೀಯ ಪಕ್ಷಪಾತದ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಈ ಸಮಿತಿಯನ್ನು ರದ್ದು ಮಾಡಿ, ಈ ವಿಷಯವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸಬೇಕು’ ಎಂದು ವಿಧಾನಪರಿಷತ್‌ ಸಭಾಪತಿಗೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಪತ್ರ ಬರೆದಿದ್ದಾರೆ.

‘ಸಮಿತಿಗೆ ಮರಿತಿಬ್ಬೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕಾಂಗ್ರೆಸ್‌, ಬಿಜೆಪಿಯ ತಲಾ ಇಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಮರಿತಿಬ್ಬೇಗೌಡ ಅವರು ತಾಂತ್ರಿಕವಾಗಿ ಜೆಡಿಎಸ್‌ ಸದಸ್ಯರಾಗಿದ್ದರೂ, ಮಾನಸಿಕವಾಗಿ ಹಾಗೂ ಸದನದಲ್ಲಿ ಅವರ ನಡವಳಿಕೆ ಹಾಗೂ ನಿಲುವುಗಳಲ್ಲಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್‌ ಪಕ್ಷದವರಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ, ಸಮಿತಿ ರಚನೆಯಲ್ಲಿ ಪಕ್ಷಪಾತ ನೀತಿ ಅನುಸರಿಸಲಾಗಿದೆ’ ಎಂದು ಪತ್ರದಲ್ಲಿ ಅವರು ದೂರಿದ್ದಾರೆ.

‘ಅಲ್ಲದೆ, ಅಹಿತಕರ ಘಟನೆಗೆ ಹಾಗೂ ಉಪ ಸಭಾಪತಿ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆಯ ಸೂತ್ರಧಾರ ಹರಿಪ್ರಸಾದ್‌ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿರುವ ಉದ್ದೇಶ ಪ್ರಶ್ನಾರ್ಹವಾಗಿದೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ADVERTISEMENT

‘ಪರಿಷತ್ತಿನಿಂದ ರಚಿಸಲಾಗಿರುವ ಎಲ್ಲ ಸಮಿತಿ ಮತ್ತು ಸದನ ಸಮಿತಿಗಳಿಗೆ ಆಯಾ ಪಕ್ಷದ ಮುಖ್ಯ ಸಚೇತರುಗಳಿಂದ ಸದಸ್ಯರುಗಳ ಹೆಸರು ಪ‍ಡೆಯುವ ಪರಿ‍ಪಾಠ ಅನುಸರಿಸಲಾಗುತ್ತದೆ. ಆದರೆ, ಈ ವಿಷಯದಲ್ಲಿ ಏಕಪಕ್ಷೀಯವಾಗಿ ಸದಸ್ಯರನ್ನು ಆಯ್ಕೆ ಮಾಡಿದ್ದೀರಿ. ಈ ನಡೆ ಕೂಡಾ ಅನುಮಾನಕ್ಕೆ ಕಾರಣವಾಗುತ್ತದೆ. ಅಲ್ಲದೆ, ಪರಿಶೀಲನಾ ಅಂಶಗಳನ್ನು ಗಮನಿಸಿದಾಗ ಸಮಿತಿಯು ತನ್ನ ವ್ಯಾಪ್ತಿಯಲ್ಲಿ ಪರಿಶೀಲಿಸಲು ಸಾಧ್ಯವಾಗದ ಅಂಶಗಳನ್ನು ಕೂಡಾ ನಮೂದಿಸಿರುವುದು ಕಂಡುಬರುತ್ತದೆ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ಇಂಥ ಗಂಭೀರ ವಿಷಯದ ಕುರಿತು ಸಮಿತಿ ರಚಿಸುವ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚಿಸಿ ರಚಿಸಿದರೆ ಫಲಿತಾಂಶ ಫಲಪ್ರದವಾಗಲಿದೆ. ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ನೀವು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು, ತಮ್ಮ ವಿಫಲತೆಯನ್ನು ಮುಚ್ಚಿಕೊಳ್ಳಲು ಮತ್ತು ಮಾತೃಪಕ್ಷಕ್ಕೆ ನಿಷ್ಠೆ ಪ್ರಕಟಿಸಿ ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸುವ ಕುತಂತ್ರದಿಂದ ಸಮಿತಿ ರಚಿಸಿದ್ದೀರಿ. ದುರುದ್ದೇಶದಿಂದ ಹಾಗೂ ಪಕ್ಷಪಾತದಿಂದ ಕೂಡಿರುವ ಈ ಸಮಿತಿ ಕ್ರಮಬದ್ಧವಾಗಿಲ್ಲ ಮತ್ತು ಅಸ್ತಿತ್ವರಹಿತವಾಗಿದೆ’ ಎಂದೂ ಆಯನೂರು ಮಂಜನಾಥ್‌ ಅವರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.