ವಿಧಾನಸೌಧ
ಬೆಂಗಳೂರು: ‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನಡೆಯುತ್ತಿದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ಮಾಡಿರುವ ಆರೋಪ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.
ಪಾಟೀಲರು ತಮ್ಮ ನಿಲುವಿನಲ್ಲಿ ಅಚಲವಾಗಿ ನಿಂತಿದ್ದರೆ, ಕಾಗವಾಡ ಶಾಸಕ ರಾಜು ಕಾಗೆಯವರು ಪಾಟೀಲರ ಬೆಂಬಲಕ್ಕೆ ನಿಂತಿದ್ದಾರೆ. ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು, ‘ನನ್ನಿಂದ ಒಂದೂ ಚರಂಡಿ ಕಟ್ಟಿಸಲೂ ಆಗಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ, ‘ಆರೋಪಿತ ಸಚಿವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ’ ಎಂದೂ ಆಗ್ರಹಿಸಿದ್ದಾರೆ. ಇವುಗಳನ್ನು ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕರು, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸೋಮವಾರ ರಾಯಚೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಈ ಬಗ್ಗೆ ರಾಜ್ಯ ನಾಯಕರನ್ನೇ ಕೇಳಿ’ ಎಂದಷ್ಟೇ ಹೇಳಿದರು.
ಅಲ್ಲಿಯೇ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ರಾಜು ಕಾಗೆ ಸೇರಿದಂತೆ ಕೆಲವು ಶಾಸಕರು ಸರ್ಕಾರದ ವಿರುದ್ಧ ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಈಗಷ್ಟೇ ಗೊತ್ತಾಗಿದೆ. ಎಲ್ಲ ಶಾಸಕರ ಜತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.
‘ಅನಗತ್ಯ ಆರೋಪ ಗೌರವ ತರದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ರಾಜೀನಾಮೆ ನಿರ್ಧಾರ ಶೀಘ್ರ: ರಾಜು ಕಾಗೆ
ಕಾಗವಾಡ (ಬೆಳಗಾವಿ ಜಿಲ್ಲೆ): ‘ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿದೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನದು ಅಂಥದ್ದೇ ಪರಿಸ್ಥಿತಿಯಿದೆ. ಒಂದು ಕೆಲಸವೂ ಆಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರವೇ ಭೇಟಿಯಾಗಿ, ರಾಜೀನಾಮೆ ಬಗ್ಗೆ ನಿರ್ಧರಿಸುವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಸ್ಥಳೀಯ ಶಾಸಕ ಭರಮಗೌಡ (ರಾಜು) ಕಾಗೆ ತಿಳಿಸಿದರು.
‘ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ನನ್ನ ಮನಸ್ಸಿಗೆ ತುಂಬಾ ನೋವಾಗಿದೆ’ ಎಂದು ಅವರು ಐನಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹ 12 ಕೋಟಿಯು ರಸ್ತೆ ಕಾಮಗಾರಿ ಮತ್ತು ₹ 13 ಕೋಟಿಯು ಸಮುದಾಯ ಭವನಗಳಿಗೆ ಮಂಜೂರಾಗಿದೆ. ಆದರೆ, ಇನ್ನೂ ಕಾರ್ಯಾದೇಶ ಬಂದಿಲ್ಲ.72 ಸಮುದಾಯ ಭವನಗಳು ಸೇರಿ ಯಾವ ಕಾಮಗಾರಿಯೂ ನಡೆದಿಲ್ಲ’ ಎಂದರು.
ರಸ್ತೆಯ ಕಾಮಗಾರಿಗೆ ತೆಂಗಿನಕಾಯಿ ಒಡೆದು, ಪೂಜೆ ಮಾಡಿ ಒಂದು ವರ್ಷವಾಗಿದೆ. ಅಂದು ಮುಖ ತೋರಿಸಿದ ಗುತ್ತಿಗೆದಾರ ಮತ್ತೆ ಬಂದಿಲ್ಲ. ಜನ ನಮ್ಮನ್ನು ಛೀ– ಥೂ ಎಂದು ಉಗುಳುವಂತಾಗಿದೆ ಎಂದೂ ಅವರು ಹೇಳಿದರು.
ರಾಜು ಕಾಗೆಯಂತೆ ಬಹಳ ಮಂದಿ ಮಾತನಾಡುವರು: ಬಿ.ಆರ್. ಪಾಟೀಲ
ಕಲಬುರಗಿ: ‘ಶಾಸಕ ರಾಜು ಕಾಗೆ ಅವರಂತೆ ಬಹಳಷ್ಟು ಮಂದಿ ಮಾತನಾಡುವವರು ಇದ್ದಾರೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ರಾಜು ಕಾಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕಾಂಗ ಪಕ್ಷದ ಸಭೆಯಲ್ಲಿ 6 ತಿಂಗಳ ಹಿಂದೆಯೇ ಏನು ಹೇಳಬೇಕೋ ಅದೆಲ್ಲವನ್ನೂ ರಾಜು ಕಾಗೆ ಹೇಳಿದ್ದಾರೆ. ಅವರಂತೆ ಇನ್ನೂ ಬಹಳ ಮಂದಿ (ಶಾಸಕರು) ಹೇಳುವವರು ಇದ್ದಾರೆ’ ಎಂದರು.
‘ಮನೆ ಹಂಚಿಕೆ ಸಂಬಂಧ ಅಫಜಲಪುರ, ಯಾದಗಿರಿ, ಹೊಸಪೇಟೆಯಿಂದ ನೂರಾರು ಫೋನ್ ಕರೆಗಳು ಬರುತ್ತಿವೆ. ಇನ್ನು ಈ ಕಥೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ನೋಡಿ’ ಎಂದು ಹೇಳಿದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ನನ್ನ ಕ್ಷೇತ್ರದ ಕೆಲವೆಡೆ ಕೆಆರ್‌ಐಡಿಬಿಎಲ್ (ಲ್ಯಾಂಡ್ ಆರ್ಮಿ) ಅಧಿಕಾರಿಗಳು ನನಗೆ ಗೊತ್ತಿಲ್ಲದೆಯೇ ಭೂಮಿಪೂಜೆ ಮಾಡಿ ಕಾಮಗಾರಿಗಳನ್ನು ಆರಂಭಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿಸಿದ ಸಚಿವರು ರಾಜೀನಾಮೆ ಕೊಡಲಿ: ಬೇಳೂರು
ಶಿವಮೊಗ್ಗ: ‘ವಸತಿ ಯೋಜನೆ ಅಡಿ ಮನೆ ಹಂಚಿಕೆಗೆ ಲಂಚ ಕೊಡಬೇಕಿದೆ ಎಂದು ಪಕ್ಷದ ಬಿ.ಆರ್.ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ. ಅದು ನಿಜವಾಗಿದ್ದರೆ ಸಂಬಂಧಿಸಿದ ಸಚಿವರು ರಾಜೀನಾಮೆ ಕೊಡುವುದು ಒಳ್ಳೆಯದು. ಅದರಲ್ಲಿ ಎರಡು ಮಾತಿಲ್ಲ’ ಎಂದು ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಬೇರೆ ಹಗರಣಗಳಲ್ಲಿ ಹಲವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದ ನಿದರ್ಶನಗಳು ಇವೆ. ಅಂಥದ್ದೇನಾದರೂ ಇದ್ದರೆ ತನಿಖೆ ಆಗಲಿ. ಸಂಬಂಧಿಸಿದ ಸಚಿವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂಬ ಒತ್ತಾಯ ನನ್ನದು’ ಎಂದರು.
‘ರಾಜೀನಾಮೆ ನೀಡಬೇಕಿರುವುದು ಜಮೀರ್ ಅಹಮದ್ ಅವರೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಯಾರೇ ಇರಲಿ. ಸಂಬಂಧಪಟ್ಟವರು ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ನಿರ್ದೋಷಿಯಾಗಿ ಹೊರಬರುವುದು ಒಳ್ಳೆಯದು. ನಂತರ ಬೇಕಿದ್ದರೆ ಅವರನ್ನು ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳಲು ಅವಕಾಶವಿರುತ್ತದೆ’ ಎಂದು ಹೇಳಿದರು.
ಅಲ್ಪಸಂಖ್ಯಾತರ ಹೆಸರಲ್ಲಿ ₹625 ಕೋಟಿ ಗೋಲ್‌ಮಾಲ್: ಎಚ್‌ಡಿಕೆ
ನವದೆಹಲಿ: ‘ಅಲ್ಪಸಂಖ್ಯಾತರ ಹೆಸರಿನಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ₹625 ಕೋಟಿ ಗೋಲ್‌ಮಾಲ್ ನಡೆಸಿದೆ. ಅಲ್ಪಸಂಖ್ಯಾತರ ಕೊಳೆಗೇರಿ ಅಭಿವೃದ್ಧಿಯ ₹398 ಕೋಟಿ ಯೋಜನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ' ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿ ಇದೇ 20ರಂದು ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಅವರು ಬರೆದ ಪತ್ರವನ್ನು ಪ್ರದರ್ಶಿಸಿದರು.
‘ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ಏಕೆ ತೆಗೆದರು? ಈ ವ್ಯಕ್ತಿ ಮುಂದಿನ ಮೂರು ವರ್ಷಕ್ಕೆ ₹1000 ಕೋಟಿ ಅನುದಾನದ ಕ್ರಿಯಾಯೋಜನೆಗೆ ಮಂಜೂರಾತಿ ನೀಡಿದ್ದರು. ಈ ಹಣದಲ್ಲಿ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಎಷ್ಟು ಹಣ ತಿಂದಿದ್ದೀರಿ? ಈ ಅತೀಕ್ ಎಂಬ ವ್ಯಕ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಕಾಂಗ್ರೆಸ್‌ನವರು ಅವರಿಂದ ಏನೇನು ಮಾಡಿಸಿದರು ಎನ್ನುವುದೂ ಗೊತ್ತಿದೆ. ಈ ಸರ್ಕಾರದಲ್ಲಿ ಸರ್ಕಾರಕ್ಕಿಂತಲೂ ದೊಡ್ಡವರು ಇದ್ದಾರೆ. ಅವರೆಲ್ಲ ಮುಖ್ಯಮಂತ್ರಿಯವರ ಸುತ್ತ ಇದ್ದಾರೆ. ಸರ್ಕಾರದ ಒಪ್ಪಿಗೆಯೇ ಇಲ್ಲದೆ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ ₹625 ಕೋಟಿ ಹಣ ಬಿಡುಗಡೆ ಆಗಿದೆ’ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಬಡವರ ವಸತಿ ಯೋಜನೆಗಳಲ್ಲೇ ₹ 2,100 ಕೋಟಿ ಕಮಿಷನ್ ಪಡೆದಿದೆ. ಯಾರಿಗೆ ಎಷ್ಟು ಕಮಿಷನ್ ಹೋಗಿದೆ ಎಂಬ ನಿಖರ ಮಾಹಿತಿಯುಳ್ಳ ಪಟ್ಟಿ ನನ್ನ ಬಳಿಯಿದೆಆರ್. ಅಶೋಕ, ವಿರೋಧ ಪಕ್ಷದ ನಾಯಕ
ರಾಜ್ಯ ಸರ್ಕಾರದ ವಿರುದ್ಧ ಅವರದೇ ಪಕ್ಷದ ಶಾಸಕರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿ.ಆರ್. ಪಾಟೀಲ, ರಾಜು ಕಾಗೆ ಅಷ್ಟೇ ಅಲ್ಲ, ಇನ್ನೂ ಹತ್ತಾರು ಶಾಸಕರು ಮಾತನಾಡಲಿದ್ದಾರೆಬಿ.ಎಸ್. ಯಡಿಯೂರಪ್ಪ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.