ADVERTISEMENT

ಹುಬ್ಬಳ್ಳಿ: ಬಿಜೆಪಿಗೆ ಇದು ಪ್ರತಿಷ್ಠೆಯ ಕ್ಷೇತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿಂದಲೇ ಪರಿಷತ್‌ ಪ್ರವೇಶ

ಬಸವರಾಜ ಹವಾಲ್ದಾರ
Published 20 ನವೆಂಬರ್ 2021, 18:07 IST
Last Updated 20 ನವೆಂಬರ್ 2021, 18:07 IST
ಪ್ರದೀಪ ಶೆಟ್ಟರ್
ಪ್ರದೀಪ ಶೆಟ್ಟರ್   

ಹುಬ್ಬಳ್ಳಿ: ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದೆ. ಏಕೆಂದರೆ, ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸಿದ್ದ ಕ್ಷೇತ್ರ.

ಶಿಗ್ಗಾವಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವ ಮುನ್ನ ಬಸವರಾಜ ಬೊಮ್ಮಾಯಿ ಅವರು ಎರಡು ಬಾರಿ ಈ ಕ್ಷೇತ್ರದಿಂದ (1998 ಹಾಗೂ 2004) ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಅವರ ರಾಜಕೀಯ ಜೀವನ ಇದೇ ಕ್ಷೇತ್ರದಿಂದ ಆರಂಭವಾಗಿತ್ತು.

ಹಾಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್‌ ಅವರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್‌ ನೀಡಿದೆ. ಇವರು ಶಾಸಕ ಜಗದೀಶ ಶೆಟ್ಟರ್‌ ಅವರ ಸಹೋದರ. ಈ ಎರಡೂ ಕಾರಣದಿಂದ ಇದು ಪ್ರತಿಷ್ಠೆಯ ಕಣವಾಗಿದೆ.

ADVERTISEMENT

2013 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರದೀಪ ಶೆಟ್ಟರ್‌ ಅವರು, ಕಾಂಗ್ರೆಸ್‌ನ ನಾಗರಾಜ ಛಬ್ಬಿ ವಿರುದ್ಧ ಸೋಲನುಭವಿಸಿದ್ದರು. 2015ರಲ್ಲಿ ನಡೆದ ಚುನಾವಣೆಯಲ್ಲಿ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿತ್ತು. ದ್ವಿಸದಸ್ಯತ್ವ ಹೊಂದಿದ್ದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರಾದರೂ, ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಅವರಿಗಿಂತ ಕಡಿಮೆ ಮತಗಳನ್ನು ಪಡೆದಿದ್ದರು.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಡಜನ್‌ಗೂ ಹೆಚ್ಚಿದೆ. ಇಬ್ಬರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದೇ ನೋಡಬೇಕಿದೆ. ಇಬ್ಬರಿಗೆ ನೀಡಿದರೆ, ಸ್ಪರ್ಧೆ ತೀವ್ರವಾಗಲಿದ್ದು, ಬಿಜೆಪಿಗೆ ಸವಾಲು ಎದುರಾಗಲಿದೆ. ಜೆಡಿಎಸ್‌ ಮುಖಂಡರು ಸಹ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ತವರು ಜಿಲ್ಲೆ ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಹಾನಗಲ್‌ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಮನೆ ಹೊಂದಿದ್ದಾರೆ. ಅವರು ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ.

ಹೊಸ ಮತದಾರರು: 7,502 ಮತದಾರರಲ್ಲಿ ಶೇ95 ರಷ್ಟು ಮತದಾರರು ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದು, ಫಲಿತಾಂಶದ ನಿರ್ಣಾಯಕರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇವರು ಆಯ್ಕೆಯಾಗಿದ್ದು, ಮೊದಲ ಬಾರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದಾರೆ.

ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೆಂದು ಗುರುತಿಸಿಕೊಳ್ಳುತ್ತಾರೆಯೇ ಹೊರತು, ಪಕ್ಷದ ಚಿಹ್ನೆಗಳ ಮೆಲೆ ಆಯ್ಕೆಯಾಗುವುದಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ತಮ್ಮ ಪಕ್ಷ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಪಂಚಾಯ್ತಿ ಫಲಿತಾಂಶ ಸಂದರ್ಭದಲ್ಲಿ ಪ್ರತಿಪಾದಿಸಿದ್ದರು. ಅವರಲ್ಲಿ ಯಾವ ಪಕ್ಷದ ಪರ ಎಷ್ಟು ಸದಸ್ಯರು ಗೆಲುವು ಸಾಧಿಸಿದ್ದಾರೆ ಎಂಬುದು ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.