ADVERTISEMENT

ರಂಗಸ್ಥಳದಲ್ಲೇ ಕಲಾಯಾತ್ರೆ ಮುಗಿಸಿದ ಹುಡಗೋಡು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:38 IST
Last Updated 11 ಮಾರ್ಚ್ 2019, 19:38 IST
ಕಲಾವಿದ ಚಂದ್ರಹಾಸ ನಾಯ್ಕ್
ಕಲಾವಿದ ಚಂದ್ರಹಾಸ ನಾಯ್ಕ್   

ಬೈಂದೂರು: ಭೀಷ್ಮ ವಿಜಯದಲ್ಲಿ ‘ಸಾಲ್ವ’ನ ಪಾತ್ರವದು. ‘ಧುರ ಪರಾಕ್ರಮ ಭೀಷ್ಮಂಗೆ ಮಾರಿಹೋದುದೆ’ ಎಂದು ಅಬ್ಬರದ ಕುಣಿತ ಆರಂಭಿಸಿದ ಕಲಾವಿದ ರಂಗಸ್ಥಳದಲ್ಲೇ ಕುಸಿದರು. ‘ಸಾಲ್ವ’ನಾಗಿ ಪಾತ್ರಕ್ಕೆ ಜೀವ ತುಂಬಿದವರು ಹುಡಗೋಡು ಚಂದ್ರಹಾಸ ನಾಯ್ಕ್ (52). ಬಣ್ಣದ ವೇಷ ತೊಟ್ಟು ಯಕ್ಷಗಾನ ಕಲೋಪಾಸನೆ ಮಾಡುತ್ತಲೇ ಅವರು ಇಹಲೋಕದ ಯಾತ್ರೆ ಮುಗಿಸಿದರು.

ಇಲ್ಲಿಗೆ ಸಮೀಪದ ಯಳಜಿತ ಗ್ರಾಮದಲ್ಲಿ ಕಲಾಧರ ಯಕ್ಷಗಾನ ಮೇಳದವರಿಂದ ಭಾನುವಾರ ರಾತ್ರಿ ‘ಭೀಷ್ಮ ವಿಜಯ’ ಪ್ರಸಂಗ ನಡೆಯುತ್ತಿತ್ತು. ರಾತ್ರಿ 11.30ರ ವೇಳೆಗೆ ‘ಅಂಬಾ ವಿವಾಹ’ ಸನ್ನಿವೇಶ ನಡೆಯುತ್ತಿತ್ತು. ಬಳ್ಕೂರು ಕೃಷ್ಣಯಾಜಿ ಅವರ ಭೀಷ್ಮನ ಎದುರು ಸಾಲ್ವನ ಪಾತ್ರ ಮಾಡಿದ್ದ ಹುಡಗೋಡು ಮಾತು ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಕುಸಿದು ಬಿದ್ದರು. ದಿಗ್ಭ್ರಾಂತರಾದ ಸಹ ಕಲಾವಿದರು ಬಳಿಗೆ ಧಾವಿಸಿ ನೋಡಿದಾಗ ನಿಶ್ಚಲರಾಗಿದ್ದರು. ತಕ್ಷಣ ಅವರನ್ನು ಬೈಂದೂರು ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲೇ ಅಸುನೀಗಿದ್ದರು. ಚಂದ್ರಹಾಸ ನಾಯ್ಕ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹುಡಗೋಡಿನವರು. ಯಕ್ಷಗಾನದ ಸವ್ಯಸಾಚಿ ಎನಿಸಿದ್ದ ಗುಂಡಿಬೈಲು ಸುಬ್ರಾಯ ಭಟ್ಟರಲ್ಲಿ ಯಕ್ಷ ನೃತ್ಯ ಕಲಿತಿದ್ದರು. ವೃತ್ತಿ ಮೇಳಗಳಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದರು.

ರಂಗದಲ್ಲೇ ಅಸುನೀಗಿದವರು
ಈ ಹಿಂದೆ ದಾಮೋದರ ಮಂಡೆಚ್ಚ, ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭು ಹೆಗಡೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಅವರು ವೇಷಧಾರಿಗಳಾಗಿ ರಂಗಸ್ಥಳದಲ್ಲಿದ್ದಾಗಲೇಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.