
ಬಾಗಲಕೋಟೆ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್.ವೈ. ಮೇಟಿ(79) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು(ಮಂಗಳವಾರ) ನಿಧನರಾಗಿದ್ದಾರೆ.
ಎಚ್.ವೈ. ಮೇಟಿ ಅವರ ನಿಧನಕ್ಕೆ ಎಲ್ಲಾ ಪಕ್ಷಗಳ ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವರು, ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು, ಹಾಲಿ ಶಾಸಕರೂ ಆದ ಎಚ್.ವೈ.ಮೇಟಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕಳೆದ ಗುರುವಾರವಷ್ಟೇ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದೆ. ಈ ವೇಳೆ ಗುಣಮುಖರಾಗಿ ಮತ್ತೆ ನಮ್ಮನ್ನು ಕೂಡಿಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. ನನ್ನ ಭರವಸೆ, ಹಾರೈಕೆಗಳೆರೆಡೂ ಹುಸಿಯಾಗಿದೆ. ಬಹುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿದ್ದ ಮೇಟಿಯವರು ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕರು. ಅವರ ನಿಧನದಿಂದ ಸಮಾಜ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಮೇಟಿಯವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕರಾದ ಎಚ್.ವೈ. ಮೇಟಿ ಅವರು ಅನಾರೋಗ್ಯದಿಂದಾಗಿ ಇಂದು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಗಿದೆ. ಅವರ ಅಗಲಿಕೆಯಿಂದ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಚ್.ವೈ. ಮೇಟಿ ಅವರ ನಿಧನಕ್ಕೆ ಸಂತಾಪ ಕೋರುವೆ. ರಾಜಕಾರಣದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದ ಅವರ ಅಗಲಿಕೆಯಿಂದ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಉಂಟಾಗಿರುವ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಸಕರಾದ ಎಚ್.ವೈ. ಮೇಟಿ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ, ಬಂಧು ವರ್ಗ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಚ್.ವೈ. ಮೇಟಿ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.
ಹಿರಿಯ ರಾಜಕಾರಣಿ ಎಚ್.ವೈ. ಮೇಟಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.