ADVERTISEMENT

ಬೆಂಗಳೂರು: 171 ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರು

ಗೆಜೆಟ್‌ಗೆ ವಿರುದ್ಧವಾಗಿ ಹೈ.ಕ. ಮೀಸಲಾತಿ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 20:25 IST
Last Updated 9 ಮಾರ್ಚ್ 2023, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗದ ಮೀಸಲಾತಿಯನ್ನು(371–ಜೆ) ಮೂಲ ಗೆಜೆಟ್‌ ಆದೇಶಕ್ಕೆ ವಿರುದ್ಧವಾಗಿ ಜಾರಿಗೊಳಿಸಿರುವ ಸುತ್ತೋಲೆಯಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನೇಮಕಾತಿಯ ಅಂತಿಮ ಪಟ್ಟಿಯಲ್ಲಿದ್ದ ಬೇರೆ ಜಿಲ್ಲೆಗಳ (ಹೈದರಾಬಾದ್ ಕರ್ನಾಟಕದವರಲ್ಲದ) 171 ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಆರೋಪಿಸಿದೆ.

‘ಪ್ರಾಥಮಿಕ ಶಿಕ್ಷಕರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅನುಸರಿಸಿರುವ ನಿಯಮವು ಸಾಮಾನ್ಯ ಮೀಸಲಾತಿ ನಿಯಮಗಳು ಹಾಗೂ 371(ಜೆ) ವಿಶೇಷ ಪ್ರಾದೇಶಿಕ ಮೀಸಲಾತಿಗೆ ಸಂಬಂಧಿಸಿದ ಮೂಲ ಗೆಜೆಟ್‌ ನಿಯಮಗಳಿಗೆ ವಿರುದ್ಧವಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಧಿಸೂಚನೆ ಹೊರಡಿಸುವ ಮೊದಲು ಸರ್ಕಾರ ನಿಯಮಗಳ ಸುತ್ತೋಲೆಯನ್ನು ಬಿಡುಗಡೆ ಮಾಡಬೇಕು. ಆದರೆ, 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಪರೀಕ್ಷೆ ಪೂರ್ವ ಬಿಡುಗಡೆಯಾಗಿದ್ದ ಸುತ್ತೋಲೆ ರದ್ದುಗೊಳಿಸಿ, ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾದ ಬಳಿಕ ಹೊಸ ಸುತ್ತೋಲೆ ಬಿಡುಗಡೆ ಮಾಡಿದೆ. ಅದನ್ನೇ ಶಿಕ್ಷಕರ ನೇಮಕಾತಿಗೆ ಪೂರ್ವಾನ್ವಯ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ’ ಎಂದು ಅಭ್ಯರ್ಥಿಗಳು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹೈದರಾಬಾದ್ ಕರ್ನಾಟಕ ವಿಶೇಷ ಮೀಸಲಾತಿಯನ್ನು ನೇಮಕಾತಿಗಳಲ್ಲಿ ಸರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ನೇಮಕಾತಿ ಪ್ರಾಧಿಕಾರಗಳು ಮತ್ತು ಸಿಬ್ಬಂದಿ ಇಲಾಖೆಗೆ ಸ್ಪಷ್ಟನೆ ಇಲ್ಲ. ಹಾಗಾಗಿ, 371 (ಜೆ) ಪ್ರಾದೇಶಿಕ ಮೀಸಲಾತಿ ತಪ್ಪಾಗಿ ಅನುಷ್ಠಾನವಾಗುತ್ತಿದೆ. ಈಗಾಗಲೇ ಕೆಎಟಿ ಮತ್ತು ಹೈಕೋರ್ಟ್‌ನಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯ ಸೂಕ್ತ ತೀರ್ಮಾನ ಪ್ರಕಟಿಸುವವರೆಗೂ ಕಾಯದೆ ಶಿಕ್ಷಣ ಇಲಾಖೆ ತರಾತುರಿಯಲ್ಲಿ 2ನೇ ಬಾರಿಗೆ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಿದೆ. ಇದರಿಂದ 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಈ ಪಟ್ಟಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.