ADVERTISEMENT

ಬ್ರಾಹ್ಮಣರನ್ನು ನಿಂದಿಸಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 15:33 IST
Last Updated 6 ಫೆಬ್ರುವರಿ 2023, 15:33 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನು ನಿಂದಿಸಿಲ್ಲ. ಮರಾಠಿ ಪೇಶ್ವೆಗಳ ವಂಶವಾಹಿ (ಡಿಎನ್‌ಎ) ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹೊರಟಿವೆ ಎಂದಷ್ಟೇ ಹೇಳಿದ್ದೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯಾವುದೇ ಸಮುದಾಯಕ್ಕೂ ನಾನು ಅಗೌರವ ತೋರಿಲ್ಲ. ಪೇಶ್ವೆಗಳ ಡಿಎನ್‌ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿಯವರು ಹುನ್ನಾರ ನಡೆಸುತ್ತಿರುವ ಬಗ್ಗೆ ಮಾತನಾಡಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನನ್ನ ಪ್ರಶ್ನೆಯ ಬಗ್ಗೆ ಗಾಬರಿ ಏಕೆ’ ಎಂದು ಕೇಳಿದರು.

‘ಕರ್ನಾಟಕದ ಬ್ರಾಹ್ಮಣರು ಸುಸಂಸ್ಕೃತರು. ಅವರ ಬಗ್ಗೆ ನನಗೆ ಗೌರವವಿದೆ. ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ನಮ್ಮ ಕುಟುಂಬ ಗೌರವದಿಂದ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಮಹಾಸಭಾಕ್ಕೆ ನಿವೇಶನ ನೀಡಿರುವುದು, ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ನಾನು ಅಧಿಕಾರದಲ್ಲಿದ್ದಾಗ. ಇದನ್ನು ಬ್ರಾಹ್ಮಣ ಮಹಾಸಭಾ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಬ್ರಾಹ್ಮಣರು ಮುಖ್ಯಮಂತ್ರಿಯಾಗುವುದಕ್ಕೆ ನನ್ನ ಸಹಮತ, ಬೆಂಬಲ ಇದೆ. ಆದರೆ, ಕನ್ನಡ ಪರಂಪರೆ, ಸಂಸ್ಕೃತಿಯ ಮೇಲೆ ದಾಳಿಮಾಡಿದವರ ಡಿಎನ್‌ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕೆ? ಎಂಬುದು ನನ್ನ ಪ್ರಶ್ನೆ. ಶೃಂಗೇರಿಯ ಚಂದ್ರಮೌಳೇಶ್ವರ ದೇವಸ್ಥಾನ ಒಡೆದವರು, ಮಹಾತ್ಮ ಗಾಂಧಿಯನ್ನು ಕೊಂದವರು ಪೇಶ್ವೆ ವಂಶಸ್ಥರು. ಅಂತಹ ಡಿಎನ್‌ಎ ಹೊಂದಿರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಹುನ್ನಾರದ ಕುರಿತಷ್ಟೇ ಮಾತನಾಡಿದ್ದೆ’ ಎಂದರು.

‘ನಮ್ಮ ಬ್ರಾಹ್ಮಣರು ಸರ್ವೇ ಜನಾ ಸುಖಿನೋ ಭವಂತು ಎಂದು ಹರಸುತ್ತಾರೆ. ಆದರೆ, ಪೇಶ್ವೆ ಬ್ರಾಹ್ಮಣರು ಸರ್ವನಾಶೋ ಭವಂತು ಎಂದು ಶಪಿಸುತ್ತಾರೆ. ನಮ್ಮದು ಕುವೆಂಪು ಹೇಳಿದಂತಹ ಸರ್ವಜನಾಂಗದ ಶಾಂತಿಯ ತೋಟ’ ಎಂದು ಕುಮಾರಸ್ವಾಮಿ ಹೇಳಿದರು.

ಪಾರ್ಥೇನಿಯಂ ಇದ್ದಂತೆ: ‘ಒಳ್ಳೆಯ ಬೆಳೆಗಳ ನಡುವೆ ಪಾರ್ಥೇನಿಯಂ ಬೆಳೆದಂತಹ ಸ್ಥಿತಿಯಲ್ಲಿ ಬಿಜೆಪಿ ಇದೆ. ಪ್ರಲ್ಹಾದ ಜೋಶಿ ಪಾರ್ಥೇನಿಯಂ ಇದ್ದಂತೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಡಿಎನ್‌ಎ ಕುರಿತು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿಲ್ಲವೆ? ನಾನು ಮಾತನಾಡಿದರೆ ವಿವಾದ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.