ADVERTISEMENT

ಮತ್ತೆ ಮಕ್ಕಳ ಹಡೆದ ಅನುಭವ

ಇಬ್ಬರು ಮಕ್ಕಳೊಂದಿಗೆ ಕೋವಿಡ್‌ ಆಸ್ಪತ್ರೆಯಿಂದ ತೆರಳಿದ ತಾಯಿಯ ಒಡಲಾಳ

ಎಂ.ಎನ್.ಯೋಗೇಶ್‌
Published 3 ಜೂನ್ 2020, 2:03 IST
Last Updated 3 ಜೂನ್ 2020, 2:03 IST
ತಮ್ಮಿಬ್ಬರು ಮಕ್ಕಳೊಂದಿಗೆ ಲಲಿತಾ ಗೌಡ
ತಮ್ಮಿಬ್ಬರು ಮಕ್ಕಳೊಂದಿಗೆ ಲಲಿತಾ ಗೌಡ   

ಮಂಡ್ಯ: ‘ನಾನು ಇಲ್ಲೇ ಸತ್ತು ಹೋದರೂ ಪರವಾಗಿಲ್ಲ, ಮಕ್ಕಳು ಮಾತ್ರ ಕೋವಿಡ್‌ ಮುಕ್ತರಾಗಬೇಕು ಎಂದೇ ದೇವರಲ್ಲಿ ಪ್ರಾರ್ಥಿಸಿದ್ದೆ. 14ನೇ ದಿನ ಇಬ್ಬರೂ ಮಕ್ಕಳ ವರದಿ ನೆಗೆಟಿವ್‌ ಬಂದಿದೆ ಎಂದೊಡನೆ ಹೊಟ್ಟೆಯೊಳಗಿನ ಬೆಂಕಿ ತಣ್ಣಗಾಯಿತು. ಮತ್ತೆ ಮಕ್ಕಳನ್ನು ಹಡೆದ ಅನುಭವವಾಯಿತು’ ಎಂದು ಲಲಿತಾಗೌಡ ಕಣ್ಣೀರಾದರು.

ಮಕ್ಕಳ ಕೋವಿಡ್‌ ಪರೀಕ್ಷೆಯ ನೆಗೆಟಿವ್ ವರದಿಗಾಗಿ ಕಾಯುತ್ತಿದ್ದ ಈ ತಾಯಿ, ತಮ್ಮ ವರದಿಯೂ ನೆಗೆಟಿವ್‌ ಎಂಬುದನ್ನೇ ಮರೆತುಬಿಟ್ಟಿದ್ದರು. ತನಗೂ ಸೋಂಕಿದೆ ಎಂಬುದು ಅವರಿಗೆ ನೋವು ತಂದಿರಲಿಲ್ಲ. ಆದರೆ, 11 ವರ್ಷದ ಮಗಳು ಹಾಗೂ 9 ವರ್ಷದ ಮಗನಿಗೆ ಸೋಂಕು ಬಂದಿದ್ದಕ್ಕೆ ಅಪಾರ ನೋವಾಗಿತ್ತು. ಇಬ್ಬರೂ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ತಿಳಿದಾಗ ಕಣ್ಣಾಲಿಗಳು ತುಂಬಿದ್ದವು.

‘ಮಕ್ಕಳು ಗುಣಮುಖರಾಗಿದ್ದಾರೆ ಎಂದು ಗೊತ್ತಾದಾಗ ಅವರನ್ನು ಮುಟ್ಟಲು ಹಿಂಜರಿದೆ. ಆಗ ವೈದ್ಯರು, ನನ್ನ ವರದಿಯೂ ನೆಗೆಟಿವ್ ಬಂದಿದೆ ಎಂದು ತಿಳಿಸಿದರು. ಕಣ್ಣಲ್ಲಿ ನೀರು ಹರಿಯಿತು. ಎರಡು ದಿನದಿಂದ ನಿದ್ದೆ ಮಾಡಿರಲಿಲ್ಲ, ಮಕ್ಕಳಿಗಾಗಿ ಪ್ರಾರ್ಥಿಸುತ್ತಿದ್ದೆ. ನಾನು ಮತ್ತೆ ಹುಟ್ಟಿ ಬಂದಿದ್ದೇನೆ ಎನ್ನುವುದಕ್ಕಿಂತ, ಮಕ್ಕಳಿಗೆ ಮತ್ತೆ ಜನ್ಮ ನೀಡಿದ್ದೇನೆ ಎನಿಸಿತು’ ಎಂದು ಅವರು ಗದ್ಗದಿತರಾದರು.

ADVERTISEMENT

ಕೆ.ಆರ್‌.ಪೇಟೆ ಪಟ್ಟಣ ಮೂಲದ ಲಲಿತಾ ಮುಂಬೈನಲ್ಲೇ ಹುಟ್ಟಿ, ಬೆಳೆದವರು. ಶಿಕ್ಷಕಿಯೂ ಆಗಿದ್ದ ಇವರು ಹೋಟೆಲ್‌ ಉದ್ಯಮ ನಡೆಸುತ್ತಿದ್ದ ಪತಿಯೊಂದಿಗೆ ಸಾಂತಾಕ್ರೂಸ್‌ನಲ್ಲಿ ವಾಸಿಸುತ್ತಿದ್ದರು.

‘ಮುಂಬೈನಲ್ಲಿ ಕೋವಿಡ್‌–19 ತೀವ್ರತೆ ಕಂಡು ಭಯವಾಗಿತ್ತು. ಅಲ್ಲಿ ಇರುವುದು ಬೇಡ ಎಂದು ನಿರ್ಧರಿಸಿ ಮೇ 12ರಂದು ಕೆ.ಆರ್‌.ಪೇಟೆಗೆ ಬಂದು ಕ್ವಾರಂಟೈನ್‌ ಆದೆವು. 15ರಂದು ಬಂದ ವರದಿಯಲ್ಲಿ ಇಬ್ಬರು ಮಕ್ಕಳ ಸಹಿತ ನನಗೂ ಪಾಸಿಟಿವ್ ಬಂದಿತ್ತು’ ಎಂದರು.

ಕೋವಿಡ್‌ ಆಸ್ಪತ್ರೆಯಲ್ಲಿ ಸಿಕ್ಕ ಚಿಕಿತ್ಸೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ‘ವೈದ್ಯರು ನಮಗೆ ಧೈರ್ಯ ತುಂಬಿದರು. ಮಕ್ಕಳ ಬಗ್ಗೆ ಚಿಂತಿಸದಂತೆ ಆಪ್ತ ಸಮಾಲೋಚನೆ ನಡೆಸಿದರು. ದೊಡ್ಡವರಿಗೆ ವಿಟಮಿನ್‌–ಇ ಕೊಟ್ಟರೆ, ಮಕ್ಕಳಿಗೆ ಝಿಂಕ್‌ ಸಿರಪ್‌ ಹಾಕುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.