ಚಿಕ್ಕಬಳ್ಳಾಪುರ/ಬೆಂಗಳೂರು: ‘ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಾಗಿಯೇ ಬರಲಿಲ್ಲ. ನಾನೇ ಆಹ್ವಾನಿಸಿದ್ದೆ. ಆದ್ದರಿಂದ ಅವರು
ಕಾರ್ಯಕ್ರಮದಲ್ಲಿ ಹಾಜರಾದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜೂ. 4ರಂದು ಕೆಎಸ್‌ಸಿಎ ಮತ್ತು ಆರ್‌ಸಿಬಿ ವತಿಯಿಂದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂದು ಬೆಳಿಗ್ಗೆ ನನ್ನನ್ನು ಭೇಟಿ ಮಾಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ಸಂಸ್ಥೆಯ ಶಂಕರ್ ಮತ್ತು ಜಯರಾಮ್ ಆಹ್ವಾನ ನೀಡಿದ್ದರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನುಆಹ್ವಾನ ಮಾಡಿರುವುದಾಗಿ ತಿಳಿಸಿದ್ದರು’ ಎಂದರು.
‘ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಚಾರವಾಗಿದೆ. ಅದು ತಪ್ಪು. ಕೆ.ಗೋವಿಂದರಾಜು (ಆಗ
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು) ಅವರು ರಾಜ್ಯಪಾಲರಿಗೆ ದೂರವಾಣಿ ಕರೆ ಮಾಡಿ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದು, ನೀವೂ ಬನ್ನಿ ಎಂದು ಆಹ್ವಾನಿಸಿದೆ’ ಎಂದರು.
‘ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಸನ್ಮಾನ ಕಾರ್ಯಕ್ರಮ 20 ನಿಮಿಷಗಳಲ್ಲಿ ಮುಗಿದು ಹೋಯಿತು. ರಾಜ್ಯಪಾಲರು ತಾವಾಗಿಯೇ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದರಿಂದ ಸ್ಪಷ್ಟೀಕರಣ ನೀಡುತ್ತಿದ್ದೇನೆ’ ಎಂದು ಹೇಳಿದರು.
‘ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪಾಲ್ಗೊಂಡಿರುವ ಕುರಿತು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ’ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.