ADVERTISEMENT

ನೋಟು ರದ್ದತಿ ಬಳಿಕ ಹರಿದ ಥೈಲಿ!

ಮನ್ಸೂರ್‌ ಖಾನ್‌ ಮುಟ್ಟಿದ್ದೆಲ್ಲಾ ಚಿನ್ನವಾಯಿತು!

ಹೊನಕೆರೆ ನಂಜುಂಡೇಗೌಡ
Published 6 ಆಗಸ್ಟ್ 2019, 19:55 IST
Last Updated 6 ಆಗಸ್ಟ್ 2019, 19:55 IST
   

ಬೆಂಗಳೂರು: ಐಎಂಎ ಜ್ಯುವೆಲ್ಸ್‌ ಸಮೂಹ ಕಂಪನಿಗಳು 2006ರಲ್ಲೇ ಆರಂಭವಾಗಿದ್ದರೂ, ಭರಾಟೆ ವ್ಯವಹಾರ ಶುರುವಾಗಿದ್ದು 2014ರ ಬಳಿಕ.ನೋಟು ರದ್ದಾದ ಮೇಲಂತೂ ಒಂದೇ ಸಲಕ್ಕೆ ₹ 600 ಕೋಟಿಗೂ ಅಧಿಕ ಹಣ ಹರಿದು ಬಂದಿದ್ದರಿಂದ ಮನ್ಸೂರ್‌ ಖಾನ್‌ ಅದೃಷ್ಟ ಖುಲಾಯಿಸಿತು!

ಅಲ್ಪಸ್ವಲ್ಪ ಹಣ ಇಟ್ಟವರು; ಕಪ್ಪು ಹಣ ಇದ್ದವರು ಹಿಂದುಮುಂದು ನೋಡದೆ ಹೂಡಿಕೆ ಮಾಡಿದರು. ಕೆಲವರು ಲಕ್ಷಗಟ್ಟಲೇ, ಇನ್ನೂ ಕೆಲವರು ಕೋಟಿಗಟ್ಟಲೇ ಹೂಡಿದರು. ಕೋಟಿಗಟ್ಟಲೆ ಹೂಡಿದವರ ಪಟ್ಟಿ ತಯಾರಾಗಿದ್ದು ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಖಾನ್‌, ಹಳೆಯ ನೋಟುಗಳನ್ನು ನಾಲ್ಕೈದು ಖಾಸಗಿ ಬ್ಯಾಂಕುಗಳಲ್ಲಿ ಚಲಾವಣೆ ಮಾಡಿದ್ದಾನೆ. ಅಷ್ಟೇ ಅಲ್ಲ, ಅಮಾನ್ಯೀಕರಣದ ವೇಳೆ ಸಾವಿರ ಕೆ.ಜಿಗೂ ಅಧಿಕ ಚಿನ್ನ ಮಾರಾಟ ಮಾಡಿದ್ದಾನೆ. ಈ ದಂಧೆಗೆ ಖಾಸಗಿ ಬ್ಯಾಂಕುಗಳು ಹೇಗೆ ಸಹಕರಿಸಿದವು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದವೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೆ, ಚಿನ್ನ ಮಾರಾಟದ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರ್‌ಬಿಐನ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲ್ವಿಚಾರಣಾ ವಿಭಾಗ (ಡಿಎನ್‌ಬಿಎಸ್‌) 2017ರ ಮಾರ್ಚ್‌ 16ರಂದು ರಿಜಿಸ್ಟ್ರಾರ್ ಆಫ್‌ ಕಂಪನೀಸ್‌ಗೆ ಕಳುಹಿಸಿದ್ದ ಇ– ಮೇಲ್‌ನಲ್ಲಿ ಐಎಂಎ ಸಮೂಹ ಕಂಪನಿಗಳು (ಐಎಂಎಐಪಿ ಸೇರಿ) 301 ಸದಸ್ಯರೊಂದಿಗೆ ₹ 22 ಕೋಟಿ ಠೇವಣಿ ಹೊಂದಿವೆ. ಇವು ನೋಂದಣಿ ಆಗಿವೆಯೇ ಎಂದು ಕೇಳಿತ್ತು. ಬೇರೆ ಮಾಹಿತಿಗಳಿದ್ದರೆ ಒದಗಿಸುವಂತೆಯೂ ಮನವಿ ಮಾಡಿತ್ತು.

ಇದಕ್ಕೂ ಒಂದು ವಾರ ಮುನ್ನ ಈ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಇದಾದ ಬಳಿಕ ಐಎಂಎ ಮಾಲೀಕ ₹ 230 ಕೋಟಿ ಘೋಷಿಸಿಕೊಂಡಿದ್ದ. ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ’ (ಪಿಎಂಜಿಕೆವೈ) ₹ 22 ಕೋಟಿ ತೆರಿಗೆ ಪಾವತಿಸಿದ್ದ.

ಆದರೆ, ಕಂಪನಿ ಸಾವಿರಾರು ಜನರಿಂದ ₹ 4,084 ಕೋಟಿಗೂ ಅಧಿಕ ಹಣ ದೋಚಿದೆ. ಒಟ್ಟು 105 ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ನಡೆದರೂ ಆದಾಯ ತೆರಿಗೆ ಇಲಾಖೆ ತಟಸ್ಥವಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಖಾನ್‌ ತನ್ನ ಕಂಪನಿಗಳನ್ನು ದಿಢೀರ್‌ ಬಂದ್ ಮಾಡಿ ಪರಾರಿಯಾಗುವವರೆಗೂ, ಆತನ ವ್ಯವಹಾರದ ಮಾದರಿ ಹಾಗೂ ಸಂಗ್ರಹಿಸಿದ ಠೇವಣಿ ಕುರಿತು ಸಂಬಂಧಪಟ್ಟ ಇಲಾಖೆಗಳು ಸಮರ್ಪಕ ತನಿಖೆ ನಡೆಸಲಿಲ್ಲ.2017ರ ಮಾರ್ಚ್‌ 31ರಂದು ಕಂಪನಿ ಆಡಿಟರ್‌ ಮತ್ತು ಅಕೌಂಟೆಂಟ್‌ ಇಕ್ಬಾಲ್‌ ಖಾನ್‌ನನ್ನು ಬೆಂಗಳೂರು ಆರ್‌ಬಿಐ ಕಚೇರಿಗೆ ಕರೆಸಲಾಗಿತ್ತು. ಆ ವೇಳೆ ಆರ್‌ಒಸಿ ಇದ್ದರು. ಸಭೆಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಏಪ್ರಿಲ್‌ 12ರಂದು ಉತ್ತರ ಕೊಡಲಾಯಿತು. ಎಲ್ಲ ಇಲಾಖೆಗಳು ಆಡಿಟರ್‌ ಹೇಳಿದ್ದನ್ನೇ ನಂಬಿಕೊಂಡು ‘ಕ್ಲೀನ್‌ ಚಿಟ್‌’ ಕೊಟ್ಟವು ಎನ್ನಲಾಗಿದೆ.

ಐಎಂಎ ಬಗ್ಗೆ ಎಚ್ಚರಿಸಿದ್ದ ಅಧಿಕಾರಿ!

ಐಎಂಎ ಸಮೂಹ ಕಂಪನಿಗಳ ವ್ಯವಹಾರ ಕುರಿತು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲ್ವಿಚಾರಣಾ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಕೆ.ಎಸ್‌. ಜೋತ್ಸ್ನಾರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಹಲವಾರು ಸಲ ಎಚ್ಚರಿಸಿದ್ದರು.

ರಾಜ್ಯದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೂ ಪಾಲ್ಗೊಳ್ಳುತ್ತಾರೆ. 2016ರಿಂದ 2019ರ ಏ‍ಪ್ರಿಲ್‌– ಮೇವರೆಗೆ ನಡೆದ ಎಲ್ಲ ಸಭೆಗಳಲ್ಲೂ ಜ್ಯೋತ್ಸ್ನಾ ಕಂಪನಿ ಅಕ್ರಮ ವ್ಯವಹಾರ ಕುರಿತು ಅಕ್ಷರಶಃ ದನಿ ಎತ್ತಿದ್ದರು. ಆದರೆ, ಯಾವ ಇಲಾಖೆಗಳೂ ಅವರ ಎಚ್ಚರಿಕೆಗೆ ಕಿವಿಗೊಡಲಿಲ್ಲ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.