ADVERTISEMENT

ನೆರೆ ಸಂತ್ರಸ್ತರಿಗಾಗಿ ಬೆಂಗಳೂರಿನಲ್ಲಿ ಭಿಕ್ಷೆ ಬೇಡುವೆ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 17:10 IST
Last Updated 29 ಆಗಸ್ಟ್ 2019, 17:10 IST
   

ಬೆಳಗಾವಿ: ‘ನೆರೆ ಸಂತ್ರಸ್ತರಿಗೆ ನೆರವಾಗಲು ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡಲಿದ್ದೇನೆ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.

ಜಾರಕಿಹೊಳಿ ಕುಟುಂಬದವರ ಪ್ರಭಾವವಿರುವ ಗೋಕಾಕ ಪಟ್ಟಣದಲ್ಲಿ ಬುಧವಾರ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಬರಗಾಲ ನಿರ್ವಹಣೆಗಾಗಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆ ಫಲವಾಗಿ ₹ 1,039 ಕೋಟಿ ಬಂದಿದೆ. ಅದರಲ್ಲಿ ಸಂತ್ರಸ್ತರಿಗೆ ₹ 10ಸಾವಿರ ಪರಿಹಾರವನ್ನು ಈ ಸರ್ಕಾರದವರು ಕೊಟ್ಟಿದ್ದಾರೆ. ಅತಿವೃಷ್ಟಿ ಪರಿಹಾರವೆಂದು ಒಂದು ರೂಪಾಯಿಯೂ ಬಂದಿಲ್ಲ. ಇದರ ವಿರುದ್ಧ ಪಕ್ಷದಿಂದ ಹೋರಾಟವನ್ನೂ ನಡೆಸುತ್ತೇವೆ’ ಎಂದಿದ್ದಾರೆ.

ADVERTISEMENT

ಅಳಲು ತೋಡಿಕೊಂಡ ಮಹಿಳೆಯರಿಗೆ, ‘ಸ್ವಸಹಾಯ ಸಂಘದಿಂದ ಪಡೆದ ಸಾಲ ಕಟ್ಟಬೇಡಿ. ಯಾರಾದರೂ ಕೇಳಿದರೆ, ನಿಮ್ಮ ಹೆಸರು ಬರೆದಿಟ್ಟು ವಿಷ ತೆಗೆದುಕೊಳ್ಳುತ್ತೇವೆ ಎಂದು ಹೇಳಿಬಿಡಿ’ ಎಂದಿರುವುದು ವಿಡಿಯೊದಲ್ಲಿದೆ.

ಗುರುವಾರ ತಾಲ್ಲೂಕಿನ ಅಂಬೇವಾಡಿಯಲ್ಲಿ ಮಾತನಾಡಿದ ಅವರು, ‘ಪ್ರವಾಹದಿಂದ ಮನೆ ಕಳೆದುಕೊಂಡ ಕ್ಷೇತ್ರದ ಜನರ ಬದುಕು ಬೀದಿಗೆ ಬಂದಿದೆ. ಕಷ್ಟ ಕಾಲದಲ್ಲಿ ನನ್ನ ನೆರವಿಗೆ ನಿಂತ ಅವರಿಗಾಗಿ ನೆರವಾಗಬೇಕಿದೆ. ಗಣೇಶ ಹಬ್ಬದ ನಂತರ ಕ್ಷೇತ್ರದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು ಸೇರಿದಂತೆ 200 ಬೆಂಬಲಿಗರು ಬೆಂಗಳೂರಿನಲ್ಲಿ ಭಿಕ್ಷೆ ಎತ್ತುತ್ತೇವೆ. ಸಂಘ–‌ಸಂಸ್ಥೆಗಳವರಿಂದ ಚಂದಾ ಎತ್ತಿ ಜನರಿಗೆ ಹೊಸ ಬದುಕು ಕಟ್ಟಿಕೊಡುತ್ತೇನೆ’ ಎಂದರು.

ಇದಕ್ಕೆ ಗೋಕಾಕದಲ್ಲಿ ‍‍ಪ್ರತಿಕ್ರಿಯಿಸಿದ ಅರಭಾವಿ ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ‘ಲಕ್ಷ್ಮಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಸಂತ್ರಸ್ತರಿಗೆ ನೆರವು ಕೊಡುತ್ತಿದ್ದೇವೆ. ಅವರ ಕ್ಷೇತ್ರದವನ್ನು ನೋಡಿಕೊಳ್ಳಲಿ. ನಮ್ಮ ಜನರನ್ನು ನಾವು ನೋಡಿಕೊಳ್ಳುತ್ತೇವೆ. ಭಿಕ್ಷೆ ಬೇಡುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.

‘ಗೋಕಾಕ, ಮೂಡಲಗಿ ತಾಲ್ಲೂಕುಗಳನ್ನು ನೋಡಿಕೊಳ್ಳುವ ಶಕ್ತಿಯನ್ನು ದೇವರು ನಮಗೆ ಕೊಟ್ಟಿದ್ದಾನೆ. ಇಲ್ಲಿಗೆ ತಲೆ ಹಾಕಬಾರದು. ಸಂತ್ರಸ್ತರ ಪರಿಹಾರದ ವಿಷಯದಲ್ಲಿ ರಾಜಕಾರಣ ಬೆರೆಸಬಾರದು’ ಎಂದು ಟಾಂಗ್‌ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.