ADVERTISEMENT

ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲೇ ಆಡಿಯೊ‌ ಕೇಳಿಸುವೆ: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 9:44 IST
Last Updated 6 ಜುಲೈ 2023, 9:44 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: 'ವರ್ಗಾವಣೆ ದಂಧೆ ಕುರಿತು ನನ್ನ ಬಳಿ ಸಾಕ್ಷ್ಯವಿದೆ. ಸ್ಪೀಕರ್ ಅನುಮತಿ ನೀಡಿದರೆ ಪೆನ್ ಡ್ರೈವ್‌ನಲ್ಲಿರುವ ಆಡಿಯೊವನ್ನು ಸದನದಲ್ಲಿರುವ ಎಲ್ಲ 224 ಸದಸ್ಯರಿಗೂ ಕೇಳಿಸುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಗುರುವಾರ ಹೇಳಿದರು.

ನಾಗಮಂಗಲ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಪ್ರಸ್ತಾಪಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, 'ಕುಮಾರಸ್ವಾಮಿ ಅವರೇ ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪ‌ ಮಾಡಬೇಡಿ. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಪೆನ್ ಡ್ರೈವ್ ತೋರಿಸಿದ್ದೀರಿ. ಪೆನ್ ಡ್ರೈವ್‌ನಲ್ಲಿ ಏನಿದೆ ಕೊಡಿ, ಕ್ರಮ ಕೈಗೊಳ್ಳುತ್ತೇವೆ' ಎಂದು ಆಗ್ರಹಿಸಿದರು.

'ನಾನು ನಿಮ್ಮ ಹೆಸರು ಹೇಳಿಲ್ಲ. ನಿಮ್ಮ ಇಲಾಖೆ ಅಧಿಕಾರಿಗಳ ವರ್ಗಾವಣೆ ಯಾರು ಮಾಡುತ್ತಾರೆ ಎಂಬುದು ಗೊತ್ತಿದೆ.‌ ಸ್ಪೀಕರ್ ಅನುಮತಿ ಕೊಟ್ಟರೆ ಪೆನ್ ಡ್ರೈವ್‌ನಲ್ಲಿರುವ ಆಡಿಯೊವನ್ನು ಇಲ್ಲಿಯೇ ಎಲ್ಲರಿಗೂ ಕೇಳಿಸುವೆ' ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ADVERTISEMENT

'ಹಿಂದೆ‌ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲರೂ ನನ್ನ ಮೇಲೆ ಆರೋಪ‌ ಮಾಡಿದ್ದಿರಿ. ಸಿಐಡಿ, ಸಿಬಿಐ ತನಿಖೆ ನಡೆದು ಸತ್ಯ ಹೊರಬಂತು.‌ ಯಾರೊಬ್ಬರೂ ನಮ್ಮಿಂದ ತಪ್ಪಾಯಿತು ಎಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ' ಎಂದು ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಜಾರ್ಜ್ ಮಧ್ಯೆ ತೀವ್ರ ವಾಕ್ಸಮರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.