ADVERTISEMENT

ಐಇಡಿಎಸ್‌ಎಸ್‌ ಯೋಜನೆ ಅನುಷ್ಠಾನದಲ್ಲಿ ಲೋ‍ಪ: ಡಿಡಿಪಿಐ ಸೇರಿ ಐವರು ಅಮಾನತು

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 16:06 IST
Last Updated 30 ಜನವರಿ 2024, 16:06 IST
ಕೋರ್ಟ್‌ ಆದೇಶ– ಪ್ರಾತಿನಿಧಿಕ ಚಿತ್ರ
ಕೋರ್ಟ್‌ ಆದೇಶ– ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪ್ರೌಢಶಾಲಾ ಹಂತದಲ್ಲಿ ಓದುತ್ತಿರುವ ಅಂಗವಿಕಲ ಮಕ್ಕಳಿಗೆ ರೂಪಿಸಿದ ವಿಶೇಷ ಯೋಜನೆ (ಐಇಡಿಎಸ್‌ಎಸ್‌) ಅನುಷ್ಠಾನದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಡಿಡಿಪಿಐ ಸೇರಿ ಐವರು ಅಧಿಕಾರಿಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಮಾನತು ಮಾಡಿದೆ.

ವಿಜಯಪುರ ಜಿಲ್ಲೆ ಉಪ ನಿರ್ದೇಶಕ (ಡಿಡಿಪಿಐ) ಎನ್‌.ಎಚ್‌.ನಾಗೂರ, ಸ್ಥಳ ನಿರೀಕ್ಷೆಯಲ್ಲಿರುವ ಡಿಡಿಪಿಐ ಪುಂಡಲೀಕ, ವಿಜಯಪುರ ಡಯಟ್‌ ಉಪನ್ಯಾಸಕರಾದ ಎ.ಎಸ್‌.ಹತ್ತಳ್ಳಿ, ಎಸ್‌.ಎ.ಮುಜಾವರ್, ಬೆಳಗಾವಿ ಅಕ್ಷರ ದಾಸೋಹ ಅಧಿಕಾರಿ ಬಿ.ಎಚ್‌.ಮಿಲ್ಲನ ಶೆಟ್ಟಿ ಅಮಾನತುಗೊಂಡವರು. 

ಪ್ರೌಢಶಾಲಾ ಹಂತದಲ್ಲಿ ಓದುತ್ತಿರುವ ಅಂಗವಿಕಲ ಮಕ್ಕಳಿಗೆ ವಿಶೇಷ ಕಲಿಕಾ ವ್ಯವಸ್ಥೆ, ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಸಾಧನ ಸಲಕರಣೆ, ಕಲಿಕಾ ಬೋಧನಾ ಸಾಮಗ್ರಿಗಳ ಪೂರೈಕೆ, ವಿಶೇಷ ಶಿಕ್ಷಕರ ಗೌರವಧನದ ವೆಚ್ಚವಾಗಿ 2009–10ನೇ ಸಾಲಿನಿಂದ 2013–14ರವರೆಗೆ ₹18.39 ಕೋಟಿ ಖರ್ಚು ಮಾಡಲಾಗಿತ್ತು. 

ADVERTISEMENT

ಕೇಂದ್ರ ಸರ್ಕಾರದ ಅನುದಾನದ ಸಮನ್ವಯ ಶಿಕ್ಷಣ ಯೋಜನೆಯ ಅಡಿ ಜಾರಿಗೆ ತಂದಿದ್ದ ಯೋಜನೆಯಲ್ಲಿ ₹2.18 ಕೋಟಿ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪದ ಮೇಲೆ ಮೂವರು ನಿರ್ದೇಶಕರೂ ಸೇರಿ 56 ಅಧಿಕಾರಿಗಳ ವಿರುದ್ಧ ಆರು ತಿಂಗಳ ಹಿಂದೆ ಎಫ್‌ಐಆರ್ ದಾಖಲಾಗಿತ್ತು. ಅವರಲ್ಲಿ ಹಲವರು ನಿವೃತ್ತರಾಗಿದ್ದು, ಕೆಲವರು ನಿಧನ ಹೊಂದಿದ್ದರು. 22 ಅಧಿಕಾರಿಗಳು ಹಾಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಐವರನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.