ADVERTISEMENT

ಮುಖ್ಯಮಂತ್ರಿ ಪೆಟ್ಟು ಕೊಟ್ಟರೂ ಬೇಸರವಿಲ್ಲ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 12:19 IST
Last Updated 21 ಜುಲೈ 2022, 12:19 IST
ಪ್ರತಾಪ ಸಿಂಹ (ಸಂಗ್ರಹ ಚಿತ್ರ)
ಪ್ರತಾಪ ಸಿಂಹ (ಸಂಗ್ರಹ ಚಿತ್ರ)   

ಮೈಸೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಪೆಟ್ಟು ಕೊಟ್ಟರೂ ಬೇಸರ ಮಾಡಿಕೊಳ್ಳುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಯೋಜನೆಯೊಂದಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿ ಬಳಿಕ ಮೊಬೈಲ್‌ ಫೋನ್‌ನಲ್ಲಿ ಫೋಟೊ ತೆಗೆದುಕೊಳ್ಳಲು ಮುಂದಾದ ಸಂಸದರನ್ನು ಮುಖ್ಯಮಂತ್ರಿ ಗದರಿಸಿ, ‘ಅತಿ ಬುದ್ಧಿವಂತರೊಂದಿಗೆ ಕೆಲಸ ಮಾಡುವುದು ಕಷ್ಟ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಂಸದರು ಸ್ಪಷ್ಟನೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗೆ ಪತ್ರ ಕೊಟ್ಟಿದ್ದೆ. ಅವರು ಸಚಿವ ಸಂಪುಟದ ಮುಂದಿಡಲು ಪತ್ರದ ಮೇಲೆ ನೋಟ್ ಬರೆದರು. ಆ ಫೈಲ್ ಫಾಲೋಅಪ್‌ ಮಾಡಲು ಲೇಟರ್‌ನ ಫೋಟೋ ತೆಗೆದುಕೊಳ್ಳಲು ಕೇಳಿದೆ. ಆಗ, ಕಾರ್ಯದ ಒತ್ತಡದಲ್ಲಿದ್ದ ಮುಖ್ಯಮಂತ್ರಿ ಸಣ್ಣದಾಗಿ ಸಿಡುಕಿದರು. ನನ್ನ ಮೇಲೆ ಸಿಡುಕಲು, ಕೋಪಿಸಿಕೊಳ್ಳಲು ಅವರಿಗೆ ಹಕ್ಕಿದೆ’ ಎಂದರು.

‘ಕ್ಷೇತ್ರದ ಅಭಿವೃದ್ಧಿಗೆ ನಾನು ಕೇಳಿದ್ದನ್ನೆಲ್ಲಾ ಕೊಟ್ಟ ಏಕೈಕ ಮುಖ್ಯಮಂತ್ರಿ ಅವರು. ಜನರ ಸೇವಕ ನಾನು. ಕಾಲಿಗೆ ಬಿದ್ದು, ಕೈ ಮುಗಿದು ಬೇಕಾದರೂ ಜನರ ಕೆಲಸ ಮಾಡಿಕೊಡುತ್ತೇನೆ. ಯಾವುದೋ ವರ್ಗಾವಣೆ, ಗುತ್ತಿಗೆಯ ಫೈಲ್ ತೆಗೆದುಕೊಂಡು ಹೋಗಿದ್ದಾಗ ಮುಖ್ಯಮಂತ್ರಿ ಸಿಡುಕಿದಿದ್ದಲ್ಲಿ ನನಗೆ ಅವಮಾನ ಆಗುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಮೈಸೂರು ಪ್ರವಾಸದ ವೇಳೆ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ನನಗೆ ಅಣ್ಣನ ಸಮಾನ. ಹುಟ್ಟುಹಬ್ಬದ ಕಾರಣ ಸಚಿವ ವಿ.ಸೋಮಣ್ಣ ಅವರಿಗೆ ಶುಭಾಶಯ ತಿಳಿಸಲು ಹೋಗಿದ್ದೆ. ಹೀಗಾಗಿ, ಮುಖ್ಯಮಂತ್ರಿ ಬಂದಿದ್ದಾಗ ಇಲ್ಲಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.