ADVERTISEMENT

ಶುಲ್ಕ ಪಾವತಿಸದಿದ್ದರೆ 30ರಿಂದ ಆನ್‌ಲೈನ್‌ ತರಗತಿ ಬಂದ್

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:34 IST
Last Updated 25 ನವೆಂಬರ್ 2020, 21:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಇದೇ 30ರಿಂದ ಆನ್‌ಲೈನ್ ತರಗತಿಯನ್ನು ರಾಜ್ಯದಾದ್ಯಂತ ಸ್ಥಗಿತಗೊಳಿಸಲಾಗುವುದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಯಾವುದೇ ಒಬ್ಬ ವಿದ್ಯಾರ್ಥಿಯು ಶುಲ್ಕ ಪಾವತಿಸದಿದ್ದರೆ ಅಂಥವರಿಗೆ ಆನ್‍ಲೈನ್ ಶಿಕ್ಷಣವನ್ನು ಕಡಿತಗೊಳಿಸಬಾರದು. ಒಂದು ವೇಳೆ ಇಂಥ ಪ್ರಕರಣ ಎಲ್ಲಾದರೂ ಕಂಡುಬಂದರೆ ಅಂಥ ಶಾಲೆಯ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಎಚ್ಚರಿಕೆ ನೀಡಿದ್ದರು.

‘ವಿದ್ಯುತ್, ನೀರು, ಸಿಬ್ಬಂದಿ ಹಾಗೂ ಶಿಕ್ಷಕರ ವೇತನ ಮತ್ತಿತರ ಕಾರಣಗಳಿಗಾಗಿ ನಮ್ಮಿಂದ ಶಾಲೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪೋಷಕರು ಶುಲ್ಕ ಪಾವತಿಸದಿದ್ದರೆ ಅಂಥ ವಿದ್ಯಾರ್ಥಿಯ ಆನ್‍ಲೈನ್ ತರಗತಿಯನ್ನು ರದ್ದುಪಡಿಸುವುದು ಅನಿವಾರ್ಯವಾಗಲಿದೆ’ ಎಂದು ಒಕ್ಕೂಟ ಹೇಳಿದೆ.

ADVERTISEMENT

‘ಎಂಟು ತಿಂಗಳುಗಳಿಂದ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಪಾವತಿಸುತ್ತಿಲ್ಲ. ಇದರಿಂದ ನಾವು ಶಾಲೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಶುಲ್ಕ ಕಟ್ಟುವಂತೆ ಪೋಷಕರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಕ್ರಮ ಅನಿವಾರ್ಯವಾಗಿದೆ’ ಎಂದುಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.

‘ಸರ್ಕಾರದ ಆದೇಶ ಇದ್ದರೂ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕರು ತಮ್ಮ ಮಕ್ಕಳ ಶುಲ್ಕ ಕಟ್ಟಿಲ್ಲ. ಅಂಥ ಮಕ್ಕಳು ಶೇ 50ರಿಂದ 60ರಷ್ಟು ಇದ್ದಾರೆ. ಅನೇಕರು ಹೋದ ವರ್ಷದ ಬಾಕಿ ಕಟ್ಟಿಲ್ಲ. ಆದರೆ, ಅವರೆಲ್ಲರಿಗೂ ಜೂನ್‌ನಿಂದ ಇವತ್ತಿನವರೆಗೂ ಆನ್‌ಲೈನ್‌ ಶಿಕ್ಷಣ ಸಿಗುತ್ತಿದೆ. ಆದರೆ, ಶಿಕ್ಷಣ ಸಚಿವರ ದಂದ್ವ ಹೇಳಿಕೆಯಿಂದ ಸಮಸ್ಯೆಯಾಗಿದೆ. ಶುಲ್ಕ ಕಟ್ಟದಿದ್ದರೂ ಪಾಸ್‌ ಮಾಡುತ್ತೇವೆ ಎಂಬ ಹೇಳಿಕೆ ಪೋಷಕರು ಮತ್ತು ಮಕ್ಕಳಲ್ಲಿ ಓದುವುದರ ಬಗ್ಗೆ ಅಸಡ್ಡೆ ಮೂಡಿಸಿದೆ. ಯಾಕೆ ಶುಲ್ಕ ಕಟ್ಟ ಬೇಕು. ಹೇಗಾದರೂ ಪಾಸ್‌ ಆಗುತ್ತೇವೆ ಎನ್ನುವಂತಾಗಿದೆ. ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಸಂಬಳ ಸೇರಿ ಖರ್ಚು ವೆಚ್ಚದ ಬಗ್ಗೆ ಜವಾಬ್ದಾರಿ ಇಲ್ಲದೆ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಿಕ್ಷಣ ಇಲಾಖೆಯು ಪ್ರತಿಷ್ಠಿತ ಶಾಲೆಗಳನ್ನು ಮುಂದಿಟ್ಟುಕೊಂಡು ಎಲ್ಲ ಶಾಲೆಗಳಿಗೂ ಅನ್ವಯಿಸುವಂತೆ ಸೂಚನೆ ನೀಡುವುದು ಸರಿಯಲ್ಲ. ನಮ್ಮದು ಬಜೆಟ್ ಶಾಲೆಗಳು. ಶಿಕ್ಷಕರಿಗೆ ವೇತನ ನೀಡಬೇಕು. ಶಾಲೆಯ ಅಗತ್ಯತೆಗಳನ್ನು ಪೂರೈಸಬೇಕು. ಇದಕ್ಕೆಲ್ಲ ನಾವು ಶುಲ್ಕದ ಮೇಲೆ ಅವಲಂಬಿತರಾಗಿದ್ದೇವೆ. ಇದೀಗ ಶುಲ್ಕ ಸಂಬಂಧ ಪೋಷಕರ ಮೇಲೆ ಒತ್ತಡ ಹಾಕುವಂತಿಲ್ಲವೆಂದರೇ ತುಂಬಾ ಕಷ್ಟವಾಗಲಿದೆ. ಯಾರು ಶುಲ್ಕ ಪಾವತಿಸುವುದಿಲ್ಲವೋ ಅಂಥ ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಯಿಂದ ಹೊರಗಿಡುತ್ತೇವೆ’ ಎಂದಿದ್ದಾರೆ.

‘ಪೋಷಕರಿಂದ ಶುಲ್ಕ ಪಡೆಯಬಾರದು ಎಂದಾದರೆ, ಸರ್ಕಾರ ಆರ್‌ಟಿಇ ಶುಲ್ಕ ಮರುಪಾವತಿ ಮಾಡಲಿ. ಶೇ 75ರಷ್ಟು ಶುಲ್ಕವನ್ನು ಪೋಷಕರ ಪರವಾಗಿ ಸರ್ಕಾರವೇ ಶಾಲೆಗಳಿಗೆ ನೀಡಲಿ. ಆನಂತರ ನಾವು ಉಚಿತ ಶಿಕ್ಷಣ ನೀಡುತ್ತೇವೆ. ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್‌ಗಳಿಂದ ರಿಯಾಯಿತಿ ನೀಡಲಿ, ಶಿಕ್ಷಕರು ಮತ್ತು ಸಿಬ್ಬಂದಿಗೆ ಕನಿಷ್ಠ ವೇತನ ನೀಡಲಿ’ ಎಂದು ಆಗ್ರಹಿಸಿರುವ ಅವರು, ‘ಶಾಲೆ ತೆರೆಯುವಾಗ ಸಂಘದ ಬೇಡಿಕೆಗಳನ್ನು ಸರ್ಕಾರ ಪೂರೈಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.