ADVERTISEMENT

ಮೋದಿ ದೇವರಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಮಲ್ಲಿಕಾರ್ಜುನ ಖರ್ಗೆ ಕಳವಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 20:03 IST
Last Updated 8 ಜನವರಿ 2023, 20:03 IST
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ   

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಎಂಬಂತೆ ಬಿಂಬಿಸಲಾಗುತ್ತಿದೆ. ವ್ಯಕ್ತಿಯೊಬ್ಬ ದೇವರಂತೆ ಬಿಂಬಿತಗೊಂಡರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಪ್ರಭುತ್ವ ನಿರಂಕುಶವಾಗುವ ಸಾಧ್ಯತೆ ಇರುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ವ್ಯಕ್ತಿಯೊಬ್ಬರನ್ನು ದೇವರು ಎಂಬಂತೆ ರೂಪಿಸಿದರೆ ಸರ್ವಾಧಿಕಾರ ಸ್ಥಾಪಿತವಾಗುತ್ತದೆ. ಇಂತಹ ಅಪಾಯದ ವಿರುದ್ಧ ಜನರು ಜಾಗೃತಗೊಳ್ಳಬೇಕು’ ಎಂದರು.

‘ಗುಜರಾತ್‌ ಪುತ್ರ ಎಂಬುದಾಗಿ ಬಿಂಬಿಸಿಕೊಂಡ ಮೋದಿ ಅವರನ್ನು ಅಲ್ಲಿಯ ಜನರು ಚುನಾವಣೆಯಲ್ಲಿ ಕೈಹಿಡಿದರು. ನಾನು ಕನ್ನಡಿಗನಾಗಿದ್ದು ಕಾಂಗ್ರೆಸ್‌ ಚುಕ್ಕಾಣಿ ಹಿಡಿದಿದ್ದೇನೆ. ಕರ್ನಾಟಕದ ಜನರು ರಾಜ್ಯದ ಪುತ್ರನೆಂಬಂತೆ ಪರಿಗಣಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು. ಬೆಲೆ ಏರಿಕೆ ಅಂತ್ಯಗೊಳಿಸಲು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲು ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಅಗತ್ಯವಿದೆ’ ಎಂದರು.

ADVERTISEMENT

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹಿಮಾಚಲಪ್ರದೇಶದಲ್ಲಿ ಬಿಜೆಪಿ ಸೋತಿದೆ. ಅಲ್ಲಿ ಸಲ್ಲದ ನಡ್ಡಾ ನಮ್ಮಲ್ಲಿ ತಿರುಗಾಡುತ್ತಿದ್ದಾರೆ. ಇಲ್ಲಿ ಏನು ಸಾಧಿಸುತ್ತಾರೆ ಎಂಬುದನ್ನು ನೋಡಬೇಕಿದೆ’ ಎಂದು ಕುಟುಕಿದರು.

‘ದೇಶದಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ನರೇಂದ್ರ ಮೋದಿ ಅವರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಈ ಹುದ್ದೆಗೆ ನೇಮಕಾತಿ ನಡೆದರೆ ಕನಿಷ್ಠ 15 ಲಕ್ಷ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಯುವಕರಿಗೆ ಉದ್ಯೋಗ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.