ಬೆಂಗಳೂರು: ಭೂರಹಿತರಾಗಿರುವ16 ಲಕ್ಷ ಕೃಷಿ ಕಾರ್ಮಿಕರ ಕುಟುಂಬದ ಮಕ್ಕಳಿಗೆ ‘ರೈತ ವಿದ್ಯಾನಿಧಿ’ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಪೌಷ್ಟಿಕ ಆಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 76ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭೂರಹಿತ ಕೃಷಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತಾ ವಲಯಗಳೆಂದು ಗುರುತಿಸಿ, 4,050 ಅಂಗನವಾಡಿಗ
ಳನ್ನು ತೆರೆಯಲಾಗುವುದು. ಇದರಿಂದ 8,100 ಮಹಿಳೆಯರಿಗೆ ಉದ್ಯೋಗ ದೊರಕಲಿದೆ. ಪೌಷ್ಟಿಕ ಆಹಾರದ ಜತೆಗೆ, ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವ ಕುಶಲಕರ್ಮಿಗಳಿಗೆ ತಲಾ ₹ 50 ಸಾವಿರ ಸಾಲ–ಸಹಾಯಧನ ಯೋಜನೆ ರೂಪಿಸಲಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ಕಡ್ಡಾಯಗೊಳಿಸಲಾಗಿದೆ. ಅದಕ್ಕಾಗಿ ₹ 250 ಕೋಟಿ ಮೀಸಲಿಡಲಾಗಿದೆ ಎಂದು ವಿವರ ನೀಡಿದರು.
75ನೇ ಸ್ವಾತಂತ್ರ್ಯ ಮಹೋತ್ಸವದ ಸಮಯದಲ್ಲಿ ಸರ್ಕಾರ ಘೋಷಿಸಿದ್ದ ಶಿಕ್ಷಣ, ಆರೋಗ್ಯ, ಕೌಶಲ, ಸ್ವಚ್ಛತೆ, ನಗರ, ಗ್ರಾಮೀಣ, ಅಂಗನವಾಡಿ, ಮಹಿಳಾ ಸ್ವಸಹಾಯ ಸಂಘಗಳು, ರೈತ ಅಭಿವೃದ್ಧಿ ಯೋಜನೆಗಳ ಸೌಲಭ್ಯಗಳನ್ನು ಒಂದು ವರ್ಷದ ಅವಧಿಯಲ್ಲಿ ಸಾಕಾರಗೊಳಿಸಲಾಗಿದೆ ಎಂದರು.
ಕರ್ನಾಟಕ ಸೌಹಾರ್ದ, ಸಾಮರಸ್ಯಕ್ಕೆ ಹೆಸರಾದ ರಾಜ್ಯ. ಸಾಮರಸ್ಯ ಕದಡುವ ಪ್ರಯತ್ನಗಳನ್ನು ನಮ್ಮ ಪೊಲೀಸ್ ವ್ಯವಸ್ಥೆ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿದೆ. ವಿಚ್ಛಿದ್ರಕಾರಕ ಶಕ್ತಿಗಳು ತಲೆ ಎತ್ತಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ನೆಹರೂ ಸ್ಮರಿಸಿದ ಬೊಮ್ಮಾಯಿ
ರಾಜ್ಯ ಸರ್ಕಾರ ಆ.14ರಂದು ಮಾಧ್ಯಮಗಳಿಗೆ ನೀಡಿದ್ದ ಸ್ವತ್ರಂತ್ರ್ಯದ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹೆಸರು ಕೈಬಿಡಲಾಗಿತ್ತು. ಸರ್ಕಾರದ ಈ ನಡೆಗೆ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿತ್ತು. ಸೋಮವಾರ ಧ್ವಜಾರೋಹಣ ನಂತರ ರಾಜ್ಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ ಭಾಷಣದಲ್ಲಿ ನೆಹರೂ ಅವರನ್ನು ಸ್ಮರಿಸಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತರು ತ್ಯಾಗ, ಬಲಿದಾನ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್‌ಲಾಲ್ ನೆಹರೂ ಮೊದಲಾದ ಮಹನೀಯರ ಹೋರಾಟ ಚರಿತ್ರಾರ್ಹವಾದುದು ಎಂದರು.
ಟಿಪ್ಪು, ಧರ್ಮ ಉಲ್ಲೇಖಿಸದ ಸಿಎಂ
ಭಾಷಣದಲ್ಲಿ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದ ಮಹನೀಯರು ಬ್ರಿಟಿಷರ ವಿರುದ್ಧ ನಡೆಸಿದ್ದ ಹೋರಾಟ ಸ್ಮರಿಸಿದರು. ಆದರೆ, ಟಿಪ್ಪು ಹೆಸರು ಉಲ್ಲೇಖಿಸಲಿಲ್ಲ.
ವಿವಿಧ ಭಾಷೆ, ಸಂಸ್ಕೃತಿ, ಜೀವನ ಶೈಲಿ ಇದ್ದರೂ ಭಾರತೀಯತೆ ನಮ್ಮೆಲ್ಲರನ್ನೂ ಬೆಸೆಯುವ ಬಂಧ ಎಂದು ಉಲ್ಲೇಖಿಸಿದರೂ, ‘ವಿವಿಧ ಧರ್ಮ’ ಪದವನ್ನು ಬಳಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.