ADVERTISEMENT

ಬಾಗಲಕೋಟೆ: ₹43.50 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ವಶ

ಇಳಕಲ್ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 14:51 IST
Last Updated 17 ಆಗಸ್ಟ್ 2021, 14:51 IST
ಇಳಕಲ್ ಪೊಲೀಸರು ಬಂಧಿಸಿದ ಕಳ್ಳರ ತಂಡದಿಂದ ವಶಪಡಿಸಿಕೊಂಡ ನಗದು ಹಾಗೂ ಚಿನ್ನಾಭರಣ
ಇಳಕಲ್ ಪೊಲೀಸರು ಬಂಧಿಸಿದ ಕಳ್ಳರ ತಂಡದಿಂದ ವಶಪಡಿಸಿಕೊಂಡ ನಗದು ಹಾಗೂ ಚಿನ್ನಾಭರಣ   

ಬಾಗಲಕೋಟೆ: ಕಳ್ಳತನ, ಬ್ಯಾಂಕಿನಿಂದ ಹಣ ಒಯ್ಯುವ ಗ್ರಾಹಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಲೂಟಿ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡವನ್ನು ಇಳಕಲ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ₹43.50 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಐದು ಮೋಟಾರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಆರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 38 ಪ್ರಕರಣಗಳಲ್ಲಿ ಈ ಆರೋಪಿಗಳು ಪೊಲೀಸರಿಗೆ ಬೇಕಾಗಿದ್ದಾರೆ. ವಶಪಡಿಸಿಕೊಂಡ ಸ್ವತ್ತಿನಲ್ಲಿ ₹37.55 ಲಕ್ಷ ನಗದು ದೊರೆತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾಹಿತಿ ನೀಡಿದರು.

ADVERTISEMENT

ಆಂಧ್ರಪ್ರದೇಶದ ಕು‍ಪ್ಪಂ ಹಾಗೂ ತಮಿಳುನಾಡಿನ ಎಂಟು ಮಂದಿಯ ಈ ತಂಡ ಇಳಕಲ್‌ ಬಸ್‌ ನಿಲ್ದಾಣದ ಬಳಿಯ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಬಳಿ ಅನುಮಾನಾಸ್ಪದ ಅಡ್ಡಾಡುವಾಗ ಗಸ್ತು ತಿರುಗುತ್ತಿದ್ದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇಳಕಲ್‌ನ ಗೌಳೇದಗುಡಿ ಬಳಿಯ ನಿವಾಸಿ ಮುಕುಂದ ತಿರುಪಾಳಿ ಅವರು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಾಗ ಅಲ್ಲಿನ ಗೋರಬಾಳ ನಾಕಾದ ಹತ್ತಿರ ಇರುವ ಗೊಂಗಡಶೆಟ್ಟಿ ಕಲ್ಯಾಣಮಂಟಪದ ಹತ್ತಿರ ಗಮನ ಬೇರೆಡೆಗೆ ಸೆಳೆದು ₹1 ಲಕ್ಷ ಲೂಟಿ ಮಾಡಿ ಪರಾರಿಯಾಗಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯಪುರ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ರಾಯಚೂರು, ಹಾವೇರಿ ಜಿಲ್ಲೆಗಳಲ್ಲೂಕೃತ್ಯ ನಡೆಸಿರುವುದು ಬಯಲಾಗಿದೆ.

ಕೃತ್ಯ ನಡೆಸುವುದು ಹೇಗೆ?: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಅವರ ಸಮೀಪ ₹20, 50ರ ನೋಟುಗಳನ್ನು ಎಸೆಯುತ್ತಿದ್ದರು. ಅಲ್ಲಿ ಹಣ ಬಿದ್ದಿದೆ ನಿಮ್ಮದೇ ಎಂದು ಪ್ರಶ್ನಿಸುತ್ತಿದ್ದರು. ಆ ವೇಳೆ ಅತ್ತ ಗಮನ ಹರಿಸುತ್ತಿದ್ದಂತೆಯೇ ಕೈಯಲ್ಲಿನ ಬ್ಯಾಗು, ಹಣದ ಕಟ್ಟು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಕಾರಿನ ಗಾಜು ಒಡೆದು, ಸ್ಕೂಟರ್‌ನ ಸೀಟ್‌ನ ಲಾಕ್ ಮುರಿದು ಹಣ ಕಳವು ಮಾಡುತ್ತಿದ್ದರು ಎಂದು ಎಸ್ಪಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ, ಹುನಗುಂದ ಸಿಪಿಐ ಹೊಸಕೇರಪ್ಪ, ಇಳಕಲ್ ಪಿಎಸ್‌ಐ ಎಸ್‌.ಬಿ.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.