
ಕೃಷ್ಣ ಬೈರೇಗೌಡ
ಸುವರ್ಣ ವಿಧಾನಸೌಧ (ಬೆಳಗಾವಿ): ನಿಯಮ ಉಲ್ಲಂಘಿಸಿ ಬಗರ್ ಹುಕುಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡುವ ಅಧಿಕಾರಿಗಳು, ಸಾಗುವಳಿ ಪತ್ರ ಪಡೆಯುವ ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಪರಿಷತ್‌ನ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸುವುದನ್ನು ಸಹಿಸುವುದಿಲ್ಲ. ಇಂತಹ ಅಕ್ರಮದಲ್ಲಿ ಕೆಲ ಅಧಿಕಾರಿಗಳೂ ಭಾಗಿಯಾಗಿರುವುದು ವಿಷಾದನೀಯ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸುಮಾರು 98 ರೈತರ ಹೆಸರಿನಲ್ಲಿ ಸಾಗುವಳಿ ಚೀಟಿ ನೀಡಿದ ಪ್ರಕರಣ ಪತ್ತೆಯಾಗಿತ್ತು. ನಕಲಿ ಸಾಗುವಳಿ ಚೀಟಿ ಆಧಾರದಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದ ಭೂ ಕಬಳಿಕೆದಾರರು, ಅಧಿಕಾರಿಗಳ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು.
ನಕಲಿ ಸಾಗುವಳಿ ಚೀಟಿಗಳಲ್ಲಿರುವ ಅಧಿಕಾರಿಗಳ ಸಹಿ ಪತ್ತೆ ಹಚ್ಚುವ ಕಾರ್ಯವನ್ನು ತನಿಖಾ ತಂಡ ಮಾಡುತ್ತಿದೆ. ಅಧಿಕಾರಿಗಳು ಒಂದು ವಾರ ಸಮಯ ಕೇಳಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೈಸೇರಿದ ತಕ್ಷಣ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.