ADVERTISEMENT

ಅಕ್ರಮ ಆಸ್ತಿ ಗಳಿಕೆ: ಇನ್‌ಸ್ಪೆಕ್ಟರ್‌ಗೆ ಜೈಲು ಶಿಕ್ಷೆ

5 ಲಕ್ಷ ದಂಡ ವಿಧಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 19:14 IST
Last Updated 27 ಆಗಸ್ಟ್ 2020, 19:14 IST
ಗಂಗಿರೆಡ್ಡಿ
ಗಂಗಿರೆಡ್ಡಿ   

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿ ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಗಂಗಿರೆಡ್ಡಿ (57) ಅವರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ, ನಾಲ್ಕು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಿ ಗುರುವಾರ ಆದೇಶಿಸಿದೆ.

ದಂಡ ಭರಿಸಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಯ ಪ್ರಮಾಣ ಘೋಷಿಸಿದ ತಕ್ಷಣ ನ್ಯಾಯಾಧೀಶರು, ಗಂಗಿರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

2009ರ ಆಗಸ್ಟ್‌ 27ರಂದು ಬೆಳ್ತಂಗಡಿಯಲ್ಲಿ ಪೊಲೀಸ್ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದ ಸಂದರ್ಭದಲ್ಲಿ ಗಂಗಿರೆಡ್ಡಿ ನಿವಾಸದ ಮೇಲೆ ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ಮತ್ತು ಅವರ ತಂಡ ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶ
ಪಡಿಸಿಕೊಂಡಿತ್ತು.

ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ₹14.71 ಲಕ್ಷದಷ್ಟು ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖೆಯನ್ನು ಪೂರ್ಣಗೊಳಿಸಿದ್ದ ಡಿವೈಎಸ್ಪಿ ಎಂ.ವಿಠ್ಠಲ ದಾಸ್ ಪೈ ಅವರು ಆರೋಪಿ ಗಂಗಿರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು, ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲದ ನ್ಯಾಯಾಧೀಶ ಹಾಗೂ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರೂ ಆದ ಬಿ.ಬಿ. ಜಕಾತಿ ಅವರು 111 ಪುಟಗಳ
ಸುದೀರ್ಘ ಆದೇಶ ನೀಡಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13 (1) (ಇ) ಅಡಿಯಲ್ಲಿ ಆರೋಪಿ ಗಂಗಿರೆಡ್ಡಿ ಅಪರಾಧ ಎಸಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಪ್ರಕಟಿಸಿದ್ದಾರೆ.

ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದ ಮಂಡಿಸಿದ್ದರು.

ಪ್ರಕರಣ ವಿವರ: 2009ರ ಆಗಸ್ಟ್‌ನಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಬಂದಿದ್ದ ಶ್ರೀನಿವಾಸ ಪ್ರಸಾದ್‌ ಎಂಬುವವರಿಂದ ಗಂಗಿರೆಡ್ಡಿ ₹ 30 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ಶ್ರೀನಿವಾಸ ಪ್ರಸಾದ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಗಂಗಿರೆಡ್ಡಿ ಮನೆಯ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ₹24.46 ಲಕ್ಷ ಮೌಲ್ಯದ ಆಸ್ತಿ ಹಾಗೂ ₹17.80 ಲಕ್ಷ ಖರ್ಚು ಮಾಡಿರುವುದು ಪತ್ತೆಯಾಗಿತ್ತು. ಆದರೆ, ಆರೋಪಿಯ ಒಟ್ಟು ಆದಾಯ ₹27.64 ಲಕ್ಷವಾಗಿದ್ದು, ₹14.71 ಲಕ್ಷ ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.