ADVERTISEMENT

ದತ್ತಾತ್ರೇಯ ಆಸ್ತಿ ಅಕ್ರಮ ಮಂಜೂರಾತಿ: ತನಿಖೆಗೆ ಸಿ.ಟಿ. ರವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 19:43 IST
Last Updated 3 ಡಿಸೆಂಬರ್ 2022, 19:43 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ದೇವರ ಹೆಸರಿನ 1,861 ಎಕರೆ ಜಾಗವನ್ನು ಗೇಣಿದಾರರು ಅಲ್ಲದವರಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಮಾಹಿತಿ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮಂಜೂರಾತಿ ರದ್ದು ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ದತ್ತ ಪೀಠ ವಿಚಾರದಲ್ಲಿ ಕಾಂಗ್ರೆಸ್ ವಿರೋಧದ ಹಿಂದೆ ಮತೀಯ ಓಲೈಕೆ ಜೊತೆಗೇ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ ಆಸ್ತಿ ಹೊಡೆಯುವ ಸಂಚು ಇತ್ತು’ ಎಂದು ದೂರಿದರು.

‘ದತ್ತಾತ್ರೇಯ ದೇವರ ಹೆಸರಿಗೆ ಜಮೀನು ಕಾಯ್ದಿರಿಸಬೇಕು. ತನಿಖೆಗೆ ರಾಜ್ಯಮಟ್ಟದ ಅಧಿಕಾರಿಗಳ ತಂಡ ರಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದತ್ತಪೀಠದ ವಿಚಾರದಲ್ಲಿ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಈ ಬಾರಿಯ ದತ್ತ ಜಯಂತಿ 4-5 ದಶಕಗಳ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನರೇಂದ್ರ ಮೋದಿಯವರು ದೇಶದ್ರೋಹಿಗಳಿಗೆ ಭಸ್ಮಾಸುರ. ದೇಶವನ್ನು ರಕ್ಷಿಸುವ ಹಾಗೂ ಜನರನ್ನು ಬದುಕಿಸಿದ ವಿಚಾರದಲ್ಲಿ ಮೋದಿ ಅವರು ಶ್ರೀಮನ್ನಾರಾಯಣ. ಜನರ ಪಾಲಿಗೆ ಕಲ್ಪವೃಕ್ಷ, ಕಾಮಧೇನು’ ಎಂದರು.

‘ರಾಜಕೀಯ ನಿಮಿತ್ತಂ ಬಹುಕೃತ ವೇಷಂ ಎಂಬುದು ರಾಹುಲ್ ಗಾಂಧಿಗೆ ಸರಿಹೊಂದುತ್ತದೆ. ರಾಹುಲ್ ಅವರು ಕೇಸರಿ ಶಾಲು ಧರಿಸಿದ ವೇಷದ ಬಗ್ಗೆ ಸಿದ್ದರಾಮಯ್ಯರಿಗೆ ಏನೆನಿಸುತ್ತದೆ’ ಎಂದು ಪ್ರಶ್ನಿಸಿದರು.

‘ಇವರಿಗೆ ಆರೆಸ್ಸೆಸ್ ಕಮ್ಯುನಲ್. ಬಾಂಬ್ ಹಾಕುವವರು ಸೆಕ್ಯುಲರ್‌ಗಳು. ಸಮಾಜವಾದಿ ಮಜಾವಾದಿ ಆದುದನ್ನು ಜನ ನೋಡಿದ್ದಾರೆ. ಇವರ ಜಾತ್ಯತೀತತೆ ಜನರಿಗೆ ತಿಳಿದಿದೆ. ಮಜಾವಾದಿ ಕುಟುಂಬ ವ್ಯಾಮೋಹಿ ಎಂದು ಕರೆಸಿಕೊಳ್ಳುವಷ್ಟೇ ಅರ್ಹತೆ ಇವರದು’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದ ರವಿ, ‘ಹಿಂದೂವಾದವೇ ಕೋಮುವಾದ ಎಂದಾದರೆ ಆ ಸನಾತನ ಧರ್ಮವನ್ನು ಬೆಂಬಲಿಸುವವ ನಾನು’ ಎಂದರು.

‘ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ಬಳಿಕ ವಿಜಯಸಂಕಲ್ಪ ಯಾತ್ರೆ ನಡೆಸಲಾಗುವುದು. 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಎಲ್ಲ ತಂತ್ರಗಾರಿಕೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.