ADVERTISEMENT

ಐಎಂಎ ವಂಚನೆ: ಪಾಲಿಕೆ ನಾಮನಿರ್ದೇಶಿತ ಸದಸ್ಯ ಬಂಧನ

ಮನ್ಸೂರ್‌ ಖಾನ್‌ರನ್ನು ದುಬೈಗೆ ಕಳುಹಿಸಿ ಶ್ರೀಲಂಕಾಕ್ಕೆ ಹಾರಿದ್ದರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 20:00 IST
Last Updated 30 ಜೂನ್ 2019, 20:00 IST
ಸಯ್ಯದ್ ಮುಜಾಹೀದ್
ಸಯ್ಯದ್ ಮುಜಾಹೀದ್   

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್‌ ಪರಾರಿಯಾಗಲು ಸಹಾಯ ಮಾಡಿದ್ದ ಆರೋಪದಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಮನಿರ್ದೇಶಿತ ಸದಸ್ಯ ಸಯ್ಯದ್ ಮುಜಾಹೀದ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಫ್ರೇಜರ್ ಟೌನ್‌ ಸಮೀಪದ ನಿವಾಸಿ ಮುಜಾಹೀದ್ ಅವರು ಮನ್ಸೂರ್ ಖಾನ್‌ ಆಪ್ತ ಆಗಿದ್ದರು. ಅವರ ಮನೆ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ್ದ ಡಿಸಿಪಿ ಎಸ್‌.ಗಿರೀಶ್ ನೇತೃತ್ವದ ತಂಡ, ಫಾರ್ಚ್ಯೂನರ್ ಕಾರು ಹಾಗೂ ಹಲವು ದಾಖಲೆಗಳನ್ನು ಜಪ್ತಿ ಮಾಡಿತ್ತು.

ದಾಳಿ ವೇಳೆ ಸಿಕ್ಕ ಕೆಲ ಪುರಾವೆಗಳನ್ನು ಆಧರಿಸಿ ಮುಜಾಹೀದ್‌ ಅವರನ್ನು ತಡರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎಸ್‌ಐಟಿ ತಂಡ, ಭಾನುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಹೆಚ್ಚಿನ ವಿಚಾರಣೆಗಾಗಿ ಮುಂದಿನ 13 ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದೆ.

ADVERTISEMENT

‘ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಜೊತೆ ಒಡನಾಟ ಇಟ್ಟುಕೊಂಡಿದ್ದ ಮುಜಾಹೀದ್, ಕಂಪನಿಯ ವ್ಯವಹಾರದಲ್ಲೂ ಭಾಗಿಯಾಗಿದ್ದ. ಆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಲಾಯಿತು. ಮನೆಯಲ್ಲಿ ಸಿಕ್ಕ ಎರಡು ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಮನ್ಸೂರ್ ಖಾನ್‌ ಹಾಗೂ ಮುಜಾಹೀದ್‌ ನಡುವಿನ ಸಂಬಂಧಕ್ಕೆ ಪುರಾವೆಗಳು ಸಿಕ್ಕವು’ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನ್ಸೂರ್ ಖಾನ್ ಎಲ್ಲಿದ್ದಾರೆ ಎಂಬ ಮಾಹಿತಿ ಮುಜಾಹೀದ್‌ ಅವರಿಗೆ ಗೊತ್ತಿದೆ. ಹೀಗಾಗಿಯೇ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಖಾನ್‌ರನ್ನು ದುಬೈಗೆ ಕಳುಹಿಸಿದ್ದರು: ‘ಐಎಂಎ ಸಮೂಹ ಕಂಪನಿಯನ್ನು ಬಂದ್ ಮಾಡುವ ವಿಚಾರವನ್ನು ಮನ್ಸೂರ್ ಖಾನ್‌, ತಿಂಗಳ ಹಿಂದೆಯೇ ಮುಜಾಹಿದ್‌ ಅವರಿಗೆ ತಿಳಿಸಿದ್ದರು. ದುಬೈಗೆ ಹೋಗು, ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮುಜಾಹೀದ್ ಸಲಹೆ ನೀಡಿದ್ದರು. ದುಬೈಗೆ ಹೋಗಲು ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು’ ಎನ್ನಲಾಗಿದೆ.

‘ಜೂನ್‌ 5ರಂದು ರಂಜಾನ್ ಹಬ್ಬದ ನಿಮಿತ್ತ ಕಚೇರಿಗೆ ರಜೆ ಘೋಷಿಸಿದ್ದ ಮನ್ಸೂರ್ ಖಾನ್, ಆ ನಂತರ ಬಾಗಿಲೇ ತೆರೆದಿಲ್ಲ. ಜೂನ್ 8ರಂದು ಮುಜಾಹೀದ್ ಹಾಗೂ ಮನ್ಸೂರ್ ಖಾನ್‌ ಇಬ್ಬರೂ ಒಂದೇ ಕಾರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದರು.’

‘ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದ ಅವರಿಬ್ಬರೂ ಒಟ್ಟಿಗೆ ನಿಲ್ದಾಣ ಪ್ರವೇಶಿಸಿದ್ದರು. ನಿಗದಿಯಂತೆ ಮನ್ಸೂರ್ ಖಾನ್‌, ದುಬೈಗೆ ಹೊರಟಿದ್ದ ವಿಮಾನ ಏರಿದ್ದರು. ಇತ್ತ ಮುಜಾಹೀದ್, ಶ್ರೀಲಂಕಾಗೆ ಹೊರಟಿದ್ದ ವಿಮಾನ ಹತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಶ್ರೀಲಂಕಾದಲ್ಲೇ ಒಂದು ವಾರ ಉಳಿದುಕೊಂಡಿದ್ದ ಮುಜಾಹೀದ್, ನಂತರ ಬೆಂಗಳೂರಿಗೆ ಬಂದಿದ್ದರು. ಐಎಂಎ ಕಂಪನಿಯಿಂದ ವಂಚನೆಗೀಡಾದ ಹೂಡಿಕೆದಾರರ ಪರವಾಗಿಯೇ ಹೋರಾಟ ಆರಂಭಿಸಿ ಅಮಾಯಕರಂತೆ ವರ್ತಿಸಿದ್ದರು. ಎಸ್‌ಐಟಿ ತಂಡ ಬಂಧಿಸುತ್ತಿದ್ದಂತೆ, ಮನ್ಸೂರ್ ಖಾನ್‌ ಪರಾರಿಯಾಗಲು ಸಹಾಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡರು. ಅವರ ಹೇಳಿಕೆಯನ್ನೇ ನ್ಯಾಯಾಲಯಕ್ಕೆ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಹಣ ಪಡೆದಿರುವ ಮುಜಾಹೀದ್?

‘ಆರೋಪಿ ಮುಜಾಹೀದ್‌, ಪುಲಿಕೇಶಿನಗರ ಠಾಣೆಯ ರೌಡಿಶೀಟರ್ ಆಗಿದ್ದರು. ಕೆಲ ವರ್ಷಗಳ ಹಿಂದೆಯೇ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಪಾಲಿಕೆ ಸದಸ್ಯರಾದ ನಂತರ ಅವರಿಗೂ ಮನ್ಸೂರ್‌ ಖಾನ್‌ಗೂ ಒಡನಾಟ ಬೆಳೆದಿತ್ತು’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಮನ್ಸೂರ್ ಖಾನ್ ಅವರ ಪ್ರತಿಯೊಂದು ವ್ಯವಹಾರದಲ್ಲೂ ಮುಜಾಹೀದ್‌ ಭಾಗಿಯಾಗುತ್ತಿದ್ದರು. ಅದೇ ಕಾರಣಕ್ಕೆ ಅವರು ಕೇಳಿದಾಗಲೆಲ್ಲ ಮನ್ಸೂರ್‌ ಖಾನ್, ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಹಣವನ್ನು ಆರೋಪಿ ವಾಪಸ್ ನೀಡಿಲ್ಲ. ಎಷ್ಟು ಹಣ ಪಡೆದಿದ್ದರು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಹೂಡಿಕೆದಾರರಿಗೆ ₹ 10 ಲಕ್ಷ ಪರಿಹಾರ ಘೋಷಿಸಿದ್ದರು

‘ಕಂಪನಿಯಿಂದ ವಂಚನೆಗೀಡಾದ ಹೂಡಿಕೆದಾರರಿಗೆ ವೈಯಕ್ತಿಕವಾಗಿ ₹ 10 ಲಕ್ಷ ಪರಿಹಾರ ನೀಡುವುದಾಗಿ ಮುಜಾಹೀದ್ ಘೋಷಿಸಿದ್ದರು. ನಂತರ, ಕಂಪನಿ ವಿರುದ್ಧ ಹೂಡಿಕೆದಾರರು ನಡೆಸುತ್ತಿದ್ದ ಪ್ರತಿಭಟನೆಗೂ ಬೆಂಬಲ ನೀಡುತ್ತಿದ್ದರು’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಬೆಂಗಳೂರಿನ ಪುರಭವನ ಎದುರು ಶನಿವಾರವಷ್ಟೇ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಜಾಹೀದ್, ಅದನ್ನು ಮುಗಿಸಿ ರಾತ್ರಿ ಮನೆಗೆ ಬಂದಿದ್ದರು. ಅದೇ ವೇಳೆಯೇ ದಾಳಿ ಮಾಡಲಾಯಿತು’ ಮೂಲಗಳು ತಿಳಿಸಿವೆ.

101 ಖಾತೆಗಳಲ್ಲಿ ₹ 1.16 ಕೋಟಿ ನಗದು

‘ಐಎಂಎ ಸಮೂಹ’ ಕಂಪನಿ ಒಡೆತನದ ವಿವಿಧ ಸಂಸ್ಥೆಗಳ ಹೆಸರಿನಲ್ಲಿ 101 ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ₹ 1.16 ಕೋಟಿ ನಗದು ಇರುವುದು ಪತ್ತೆಯಾಗಿದೆ’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ಹೇಳಿದರು. ‘ಖಾತೆಗಳ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಸಂಬಂಧಪಟ್ಟ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಹಲವೆಡೆ ಖಾತೆಗಳಿದ್ದು, ಪತ್ತೆ ಕೆಲಸ ಮುಂದುವರಿದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.