ADVERTISEMENT

ಅನೈತಿಕ ಪೊಲೀಸ್‌ಗಿರಿಗೆ ನಲುಗಿದ ಕುಂದಾದ್ರಿ ಬೆಟ್ಟ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟ
ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟ   

ತೀರ್ಥಹಳ್ಳಿ: ದಕ್ಷಿಣ ಭಾರತದ ಜೈನ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕುಂದಾದ್ರಿ ಬೆಟ್ಟದಲ್ಲಿ ಪ್ರವಾಸಿಗರು ಹಾಗೂ ಭಕ್ತರಿಗೆ ಅನೈತಿಕ ಪೊಲೀಸರ ಕಾಟ ಎದುರಾಗಿದ್ದು, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.

ಇದೇ 15ರ ಸಂಜೆ ಬೆಟ್ಟಕ್ಕೆ ಬಂದಿದ್ದ ಯುವಕ–ಯುವತಿಯರನ್ನು ಸ್ಥಳೀಯ ಯುವಕರ ಗುಂಪು ಅಡ್ಡಗಟ್ಟಿ ಕಿರುಕುಳ ನೀಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸಾರಿಗೆ ಇಲಾಖೆಯ ನೋಂದಣಿ ಸಂಖ್ಯೆ ಹೊಂದಿದ್ದ ಕಾರಿನಲ್ಲಿ ಬಂದಿದ್ದ ಭಕ್ತರು ಮತ್ತು ಪ್ರವಾಸಿಗರ ಮೇಲೆ ಏಕಾಏಕಿ ಎರಗಿದ ಅನೈತಿಕ ಪೊಲೀಸರ ಗುಂಪು ಹಣ ಕೊಡುವಂತೆ ಪೀಡಿಸಿ ಬೆದರಿಕೆ ಹಾಕಿದೆ. ಕಾರಿನ ಕೀ ಕಿತ್ತುಕೊಂಡು ಯುವಕ–ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದೆ. ಇದರಿಂದ ಹೆದರಿದ ಪ್ರವಾಸಿಗರು ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆದ ಮೇಲೆ ಗುಂಪು ವಾಪಸಾಯಿತು ಎನ್ನಲಾಗಿದೆ.

ADVERTISEMENT

ಕೆಲ ದಿನಗಳಿಂದ ಕುಂದಾದ್ರಿ ಬೆಟ್ಟದಲ್ಲಿ ಅನೈತಿಕ ಪೊಲೀಸ್‌ಗಿರಿ ಗುಂಪು ಪೊಲೀಸರ ಹೆಸರಿನಲ್ಲಿ ಹಣ ಕೀಳುವ ದಂಧೆಯಲ್ಲಿ ತೊಡಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದರು. ಈ ಹಿಂದೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಕೆಲ ಯುವಕರನ್ನು ಸ್ಥಳೀಯರು ಹಿಡಿದು ಆಗುಂಬೆ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸ್ ಹಾಗೂ ಸ್ಥಳೀಯರ ನೆರವಿನಿಂದ ಅಕ್ರಮ ಚಟುವಟಿಕೆ ತಡೆಯಬೇಕು ಎಂದು ಒತ್ತಾಯಿಸಿದರು.

‘ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಶನಿವಾರ, ಭಾನುವಾರ ಇಲ್ಲಿ ಹೆಚ್ಚಿನ ನಿಗಾವಹಿಸಲು ಪೊಲೀಸರನ್ನು ನೇಮಿಸಲಾಗಿದೆ’ ಎಂದು ಆಗುಂಬೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.