ಬೆಂಗಳೂರು: ‘ಆರ್‌ಸಿಬಿ ಕಾಲ್ತುಳಿತದ ಪ್ರಕರಣದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಆರೋಪಿ ನಂ 1, 2, 3. ಇಡೀ ಘಟನೆಯ ಇವರೇ ಹೊಣೆ ಹೊರಬೇಕು, ರಾಜೀನಾಮೆ ನೀಡಬೇಕು ಮತ್ತು ಸಿಬಿಐ ತನಿಖೆ ನಡೆಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿ, ಆ ದಿನದ ವಿದ್ಯಮಾನವನ್ನು ವಿವರಿಸಿದರು. ತಮ್ಮ ಆರೋಪಗಳಿಗೆ ಪೂರಕವಾಗಿ ಪೊಲೀಸರ ವಾಕಿಟಾಕಿ ಸಂಭಾಷಣೆಯ ವಿವರ, ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಮತ್ತಿತರ ದಾಖಲೆ ಮುಂದಿಟ್ಟು, ಇಡೀ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹರಿಹಾಯ್ದರು. ‘ಪ್ರಜಾವಾಣಿ’ ಸಂಪಾದಕೀಯದ ಸಾಲುಗಳನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಅವರನ್ನು ತಿವಿದರು.
ಭಾಷಣದ ಪ್ರಮುಖ ಅಂಶಗಳು:
* ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇದ್ದಿದ್ದರೆ, ಒಳ್ಳೆಯ ಹೃದಯ ಇದ್ದಿದ್ದರೆ ಮೃತಪಟ್ಟ 11 ಅಮಾಯಕ ಜೀವಗಳಿಗೆ, ಮಕ್ಕಳನ್ನು ಕಳೆದುಕೊಂಡ ಹೆತ್ತವರನ್ನು ಉದ್ದೇಶಿಸಿ ತಪ್ಪಾಯಿತು ಕ್ಷಮಿಸಿ ಎಂದು ಕೇಳಬೇಕಿತ್ತು
* ಮುಂದೆ ಇಂತಹ ಘಟನೆ ನಡೆಯದೇ ಇರಲು ನಿಯಮ ರೂಪಿಸಬೇಕು. ನೋವಿನಲ್ಲಿ ಕೈತೊಳೆಯುತ್ತಿರುವ ತಂದೆ–ತಾಯಿಗೆ ನ್ಯಾಯ ಸಿಗಬೇಕು
* ಆರ್‌ಸಿಬಿ ವಿಜಯೋತ್ಸವಕ್ಕೆ ವಿಧಾನಸೌಧಕ್ಕೆ ಬನ್ನಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬನ್ನಿ ಎಂದು ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದರು. ವಿಜಯೋತ್ಸವ ಮೆರವಣಿಗೆ, ಸಂಚಾರ ನಿಯಂತ್ರಣದ ಬಗ್ಗೆಯೂ ಮಾಹಿತಿ ನೀಡಿ ಅಭಿಮಾನಿಗಳನ್ನು ಪ್ರಚೋದಿಸಿದರು
* ವೇದಿಕೆ ಮೇಲೆ 20–25 ಗಣ್ಯರು ಇರಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ನೀಡಿತ್ತು. ಆದರೆ ಸಂತೆಯಂತೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 250 ಕ್ಕೂ ಜನ ವೇದಿಕೆಯಲ್ಲಿದ್ದರು. ಇದಕ್ಕೆ ಅನುಮತಿ ನೀಡಿದ್ದು ಯಾರು?
* ಸಚಿವ ಜಮೀರ್ ಅಹ್ಮದ್ ಅವರ ಮಗನನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಮೊಮ್ಮಗ ಎಲ್ಲೋ ಬದಿಯಲ್ಲಿ ನಿಂತಿದ್ದರು. ಸಚಿವರ ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ನಿರತರಾಗಿದ್ದರು. ಸ್ಟೇಡಿಯಂ ಬಳಿ ಅಮಾಯಕರ ಪ್ರಾಣ ಕಳೆದುಕೊಂಡರು
* ಮೈಕಲ್ ಡಿ ಕುನ್ಹ ಆಯೋಗದ ವರದಿ ಪ್ರಕಾರ ಕ್ರೀಡಾಂಗಣದ ಬಳಿ 515 ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಬಂದೋಬಸ್ತ್ ರಿಜಿಸ್ಟರ್‌ನಲ್ಲಿ 194 ಮಂದಿ ಮಾತ್ರ ಸಹಿ ಮಾಡಿದ್ದರು. ಹಿರಿಯ ಅಧಿಕಾರಿಗಳು ಕಾಲ್ತುಳಿತ ಸಾವಿನ ಬಗ್ಗೆ ಸಚಿವರ ಗಮನಕ್ಕೆ ತಂದರೂ ಕಾರ್ಯಕ್ರಮ ನಿಲ್ಲಿಸಲಿಲ್ಲ
ಸರ್ಕಾರದ ತಪ್ಪಿಲ್ಲ ಪೊಲೀಸರದ್ದೇ ತಪ್ಪು. ಅವರ ತಪ್ಪಿನಿಂದಲೇ ಈ ಅವಘಡ ತಲುಪಿದೆ ನೀವು ಸರ್ಕಾರವನ್ನು ಏಕೆ ಗುರಿ ಮಾಡುತ್ತೀರಿ? ನಾವು ವಾಸ್ತವ ಬಿಚ್ಚಿಡುತ್ತೇವೆಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಶಾಸಕ
ಕರಿಯಪ್ಪ ಬಿಳಿಯಪ್ಪ ಎಂದು ಹೇಳದೇ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಗೃಹ ಸಚಿವ ಮತ್ತು ಇಡೀ ಸರ್ಕಾರದ ತಪ್ಪಿದೆ ಅಂತ ನೇರವಾಗಿ ಹೇಳಿ ಯಾಕೆ ಹಿಂಜರಿಯುತ್ತೀರಿಬಸನಗೌಡ ಪಾಟಿಲ ಯತ್ನಾಳ ಬಿಜೆಪಿ ಉಚ್ಛಾಟಿತ ಶಾಸಕ
‘ಆರ್‌ಸಿಬಿ ಭಾಗಿ ಎಂದರೆ ತೆವಳಿದ ಸರ್ಕಾರ’:
‘ಆರ್‌ಸಿಬಿ ಭಾಗಿ ಎಂದರೆ ಸರ್ಕಾರ ತೆವಳಿತು. ಅಷ್ಟಕ್ಕೂ ಈ ಆರ್‌ಸಿಬಿ ಯಾರು? ಅದೇನು ಕರ್ನಾಟಕದ ತಂಡವಾ ಅಥವಾ ಭಾರತದ ತಂಡವಾ? ಆ ತಂಡದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇದ್ದಾರೆ’ ಎಂದು ಪ್ರಶ್ನಿಸಿದವರು ಬಿಜೆಪಿಯ ಎಸ್.ಸುರೇಶ್ ಕುಮಾರ್. ‘ಆರ್‌ಸಿಬಿ ಸಮೂಹ ಸನ್ನಿಗೆ ಸರ್ಕಾರ ತುತ್ತಾಯಿತು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು. ಇದು ಶೋಭೆ ತರುವ ವಿಚಾರವೇ? ಆರ್‌ಸಿಬಿ ತಂಡ ಹಣಕ್ಕಾಗಿ ಆಡಿದೆಯೇ ಹೊರತು ಕರ್ನಾಟಕಕ್ಕಾಗಲಿ ಭಾರತಕ್ಕಾಗಿ ಆಡಿಲ್ಲ’ ಎಂದರು. ‘ಉಪಮುಖ್ಯಮಂತ್ರಿ ಆರ್‌ಸಿಬಿ ಬಾವುಟ ಹಿಡಿದುಕೊಂಡು ಕಪ್‌ಗೆ ಮುತ್ತು ಕೊಟ್ಟುಕೊಂಡು ಮೆರವಣಿಗೆಯಲ್ಲಿ ಹೋದರು. ಇದು ಯಾವ ಸಂದೇಶ ಕೊಡುತ್ತದೆ. ಇಷ್ಟೊಂದು ಘೋರ ದುರಂತ ಆಗಿದ್ದರೂ ಯಾರೊಬ್ಬರೂ ಈವರೆಗೆ ಬೇಷರತ್ ಕ್ಷಮೆ ಕೇಳಲಿಲ್ಲ. ಒಬ್ಬರು ಕಣ್ಣೀರು ಹಾಕಿದರು. ಅದರ ಹಿಂದೆ ಮೊಸಳೆಯೂ ಇತ್ತು. ಅಂತಃಕರಣ ಇರಲಿಲ್ಲ’ ಎಂದು ಕುಟುಕಿದರು.
‘ಮೆರವಣಿಗೆಗೆ ಅವಕಾಶ ನೀಡದ್ದಕ್ಕೆ ಟೀಕಿಸಿದ್ದು ನೀವೇ ಅಲ್ಲವೇ?’:
‘ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವರ ನಡೆಯನ್ನು ಖಂಡಿಸಿ ‘ಎಕ್ಸ್’ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ. ಅದನ್ನೂ ಪ್ರಸ್ತಾಪಿಸಿಲ್ಲವೇಕೇ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ‘‘ಹಲವು ವರ್ಷಗಳ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಈ ವರ್ಷ ನನಸು ಮಾಡಿದೆ. ಆದರೆ ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಪರಮೇಶ್ವರ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಸಾಬೀತು ಮಾಡಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ’ ಎಂದು ಬಿಜೆಪಿ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸಂದೇಶ ಹಾಕಿತ್ತು. ಆ ಬಗ್ಗೆಯೂ ನೀವು ಹೇಳಬೇಕಲ್ಲವೆ’’ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.