ADVERTISEMENT

ಹೆಚ್ಚು ಉದ್ಯೋಗ ನೀಡುವವರಿಗೆ ಉತ್ತೇಜನ: ಬೊಮ್ಮಾಯಿ ಹೇಳಿಕೆ

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ರಾಜ್ಯ ಮಟ್ಟದ ಸಮ್ಮೇಳನ: ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:31 IST
Last Updated 16 ಜುಲೈ 2022, 19:31 IST
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ– ಸಂಸ್ಥೆಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಚಿವರಾದ ಬಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ– ಸಂಸ್ಥೆಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಚಿವರಾದ ಬಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ/ಹಾವೇರಿ: ‘ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ನೀಡುವ ಕಂಪನಿಗಳಿಗೆ ವಿವಿಧ ರೀತಿಯ ಉತ್ತೇಜನ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಉದ್ಯೋಗ ನೀತಿ ರೂಪಿಸಲಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಡೆನಿಸನ್‌ ಹೋಟೆಲ್‌ ನಲ್ಲಿ ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ಕೆಲಸ ಸಿಗಬೇಕು. ವಿಶೇಷವಾಗಿ ಮಹಿಳೆಯರಿಗೆ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗಬೇಕು’ ಎಂದು ಹೇಳಿದರು.

ADVERTISEMENT

‘ಕೈಗಾರಿಕೆ ಇಲಾಖೆ’ ಹೆಸರು ಬದಲಾವಣೆ: ಸಣ್ಣ– ಮಧ್ಯಮ ಹಾಗೂ ಭಾರಿ ಪ್ರಮಾಣದ ಕೈಗಾರಿಕೆಗಳು ಎನ್ನುವ ಪ್ರತ್ಯೇಕತೆ ತೆಗೆದುಹಾಕಿ ಎಲ್ಲವನ್ನೂ ಕೈಗಾರಿಕೆಗಳು ಎಂದು ಗುರುತಿಸಲಾಗುವುದು. ಇಲಾಖೆಯ ಹೆಸರನ್ನು ‘ಕೈಗಾರಿಕೆ ಇಲಾಖೆ’ ಎಂದು ಮರುನಾಮ
ಕರಣ ಮಾಡಲಾಗುವುದು ಎಂದರು.

ಕೃಷಿ ಉದ್ಯಮ ನೀತಿ ಜಾರಿಗೆ ಚಿಂತನೆ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಖುರ್ಸಾಪುರ ಗ್ರಾಮದಲ್ಲಿ ‘ಶಿಗ್ಗಾವಿ ಜವಳಿ ಪಾರ್ಕ್‌’ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬೊಮ್ಮಾಯಿ, ‘ರೈತರ ಬದುಕನ್ನು ಹಸನುಗೊಳಿಸಲು ಕೃಷಿ ನೀತಿಯಲ್ಲಿ ಬದಲಾವಣೆ ತರುವುದರೊಂದಿಗೆ ‘ಕೃಷಿ ಉದ್ಯಮ ನೀತಿ’ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ’ ಎಂದರು.

‘ರೈತರ ಮಕ್ಕಳು ವಿದ್ಯೆ ಪಡೆದು ಇತರ ವೃತ್ತಿಗಳಿಗೂ ಬರಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ, ರೈತ ಕುಟುಂಬದ ಆದಾಯ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಉದ್ಯಮ ನೀತಿ ಜಾರಿಗೊಳಿಸಲಾಗುವುದು’ ಎಂದರು.

ಪ್ರತಿ ತಾಲ್ಲೂಕಿನಲ್ಲೂ ಜವಳಿ ಪಾರ್ಕ್‌: ಶಿಗ್ಗಾವಿ ಜವಳಿ ಪಾರ್ಕ್‌ ಪೂರ್ಣಗೊಂಡರೆ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇದೇ ರೀತಿ ಪ್ರತಿ ತಾಲ್ಲೂಕುಗಳಲ್ಲೂ ‘ಜವಳಿ ಪಾರ್ಕ್’ ಸ್ಥಾಪಿಸುವುದರಿಂದ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿಯಾಗಲಿದೆ ಎಂದು ಹೇಳಿದರು.

ಚರ್ಚಿಸೋಣ: ‘ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ಹಾಕಿರುವ ಬಗ್ಗೆ ಚರ್ಚಿಸಲು ವರ್ತಕರು ಹಾಗೂ ಉದ್ಯಮಿಗಳ ಸಭೆಯಲ್ಲಿ ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಕರೆಯುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸೋಣ. ಈ ಚರ್ಚೆಯ ವರದಿಯನ್ನು ಜಿಎಸ್‌ಟಿ ಮಂಡಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.