ADVERTISEMENT

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ನೊಟೀಸ್

2015-16ನೇ ಸಾಲಿನ ಹಣಕಾಸು ವ್ಯವಹಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 14:38 IST
Last Updated 14 ಆಗಸ್ಟ್ 2023, 14:38 IST
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ.  
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ.     

ಗೋಕರ್ಣ: ಕುಮಟಾ ತಾಲ್ಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ₹ 1.38 ಕೋಟಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಮೊತ್ತದ ಪೈಕಿ ಶೇ.20ರಷ್ಟನ್ನು ಭರಣ ಮಾಡಿ ಉಳಿದ ಮೊತ್ತ ಪಾವತಿ ಸಂಬಂಧ ತಡೆಯಾಜ್ಞೆ ಪಡೆಯಲು ಆಡಳಿತ ಮಂಡಳಿ ಮುಂದಾಗಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಸೋಮವಾರ ಆನ್‍ಲೈನ್ ಮೂಲಕ ಸಭೆ ನಡೆಸಿದ ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಸದಸ್ಯರು, ‘2008ರಿಂದ ಈವರೆಗಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಅವರು ನೀಡಿದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂಬ ನಿರ್ಣಯ ಕೈಗೊಂಡರು.

ADVERTISEMENT

2015-16ನೇ ಸಾಲಿನಲ್ಲಿ ರಾಮಚಂದ್ರಾಪುರ ಮಠ ದೇವಸ್ಥಾನದ ಆಡಳಿತ ನಡೆಸುತ್ತಿತ್ತು. ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬಂದ ಕಾರಣ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿತ್ತು. ಮುಂದಿನ ಹಂತದ ವಿಚಾರಣೆಗೆ ಮುನ್ನ ಸಮಿತಿ ಇಲಾಖೆಗೆ ದಂಡದ ಮೊತ್ತದ ಶೇ.20 ರಷ್ಟು (₹ 27.65 ಲಕ್ಷ) ಪಾವತಿಸಬೇಕಿತ್ತು. ಈ ಮೊತ್ತವನ್ನು ಪಾವತಿಸುವ ಸಂಬಂಧ ಮೇಲ್ವಿಚಾರಣಾ ಸಮಿತಿ ಸದಸ್ಯರು ಸಭೆ ನಡೆಸಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಗಣಪತಿ ಹಿರೇ ಭಟ್, ಸುಬ್ರಹ್ಮಣ್ಯ ಅಡಿ, ಪರಮೇಶ್ವರ ರಮಣಿ ಮತ್ತು ಮಹೇಶ ಹಿರೇಗಂಗೆ ಪಾಲ್ಗೊಂಡಿದ್ದರು.

‘ಆದಾಯ ತೆರಿಗೆ ಇಲಾಖೆಯ ನೋಟಿಸ್‌ಗೆ ಸಂಬಂಧಿಸಿದಂತೆ ನೀಡಿದ ನೋಟಿಸಿನ ಬಗ್ಗೆ ಕ್ರಮ ಕೈಗೊಳ್ಳಲು ಪರಿಣಿತ ಲೆಕ್ಕ ಪರಿಶೋಧಕನನ್ನು ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅವರು ನೀಡಿದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.