ADVERTISEMENT

ಧ್ವಜ ಕಟ್ಟಿ ಇಳಿಯುವಾಗ ಬಿದ್ದು ಟೆಕಿ ಸಾವು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:34 IST
Last Updated 15 ಆಗಸ್ಟ್ 2022, 21:34 IST
   

ಬೆಂಗಳೂರು: ಹೆಣ್ಣೂರು ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ತ್ರಿವರ್ಣ ಧ್ವಜ ಕಟ್ಟಿ ಇಳಿಯುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದು, ವಿಶುಕುಮಾರ್ (33) ಎಂಬುವವರು ಮೃತಪಟ್ಟಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿಶುಕುಮಾರ್, ಎಚ್‌ಬಿಆರ್ ಲೇಔಟ್‌ 5ನೇ ಹಂತದಲ್ಲಿ ವಾಸವಿದ್ದರು. ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರ ಸಾವಿನ ಬಗ್ಗೆ ತಂದೆ ನಾರಾಯಣ ಭಟ್ ದೂರು ನೀಡಿದ್ದಾರೆ. ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೆಣ್ಣೂರು ಪೊಲೀಸರು ಹೇಳಿದರು.

‘ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಯಲ್ಲಿ ವಿಶುಕುಮಾರ್ ನೆಲೆಸಿದ್ದರು. ತಾವು ವಾಸವಿದ್ದ ಮನೆಯ ಎರಡನೇ ಮಹಡಿಗೆ ಭಾನುವಾರ ಮಧ್ಯಾಹ್ನ ಹೋಗಿದ್ದ ಅವರು, ಗೋಡೆ ಏರಿ ತ್ರಿವರ್ಣ ಧ್ವಜ ಕಟ್ಟಿದ್ದರು. ನಂತರ, ಕೆಳಗೆ ಇಳಿಯುವಾಗ ಕಾಲು ಜಾರಿ 30 ಅಡಿ ಮೇಲಿಂದ ನೆಲಕ್ಕೆ ಬಿದ್ದಿದ್ದರು.’

ADVERTISEMENT

‘ತಲೆ, ಕೈ–ಕಾಲು ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿತ್ತು. ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ವಿಶುಕುಮಾರ್ ಅವರು ರಾತ್ರಿ ಅಸುನೀಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.