ADVERTISEMENT

ಭಾರತ ಜೋಡೊ, ಸಂವಿಧಾನ ಬಚಾವೋ: ಧರ್ಮಸೇನ

ಕಾಂಗ್ರೆಸ್‌ನ ವಿವಿಧ ಘಟಕಗಳಿಂದ 28ರಿಂದ ಪಾದಯಾತ್ರೆ –ಧರ್ಮಸೇನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 17:47 IST
Last Updated 24 ನವೆಂಬರ್ 2022, 17:47 IST

‌ಬೆಂಗಳೂರು: ಕೆಪಿಸಿಸಿಯ ಮುಂಚೂಣಿ ಒಂಬತ್ತು ಘಟಕಗಳು ಒಟ್ಟಿಗೆ ಇದೇ 28ರಿಂದ ಐದು ದಿನ 10 ಜಿಲ್ಲೆಗಳಲ್ಲಿ ‘ಭಾರತ ಜೋಡೊ– ಸಂವಿಧಾನ ಬಚಾವೋ’ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿವೆ. ಪ್ರತಿ ಜಿಲ್ಲೆಯಲ್ಲಿ 10 ಕಿ.ಮೀ ಪಾದಯಾತ್ರೆಯ ನೇತೃತ್ವವನ್ನು ಪಕ್ಷದ ಪರಿಶಿಷ್ಟ ಜಾತಿ ವಿಭಾಗ ವಹಿಸಲಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರಈ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥ ಆರ್.ಧರ್ಮಸೇನ, ‘ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ವಿಭಾಗ, ಕಿಸಾನ್ ವಿಭಾಗ, ಅಸಂಘಟಿತ ಕಾರ್ಮಿಕ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಭಾಗಗಳಿಗೆ ಕಾರ್ಯಕ್ರಮ ಜವಾಬ್ದಾರಿಯನ್ನು ಎಐಸಿಸಿ ನೀಡಿದೆ. ಈ ಎಲ್ಲ ಸಮುದಾಯದ ಜನರಿಗೆ ಸಂವಿಧಾನ ರಕ್ಷಣೆ ನೀಡಿದೆ. ಹೀಗಾಗಿ, ಅದರ ರಕ್ಷಣೆಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದರು.

‘ಚಿತ್ರದುರ್ಗದಲ್ಲಿ ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಯಾತ್ರೆ ಉದ್ಘಾಟಿಸುವರು. ಅಂದು 10 ಕಿ.ಮೀ ಯಾತ್ರೆ ನಡೆಯಲಿದೆ. ಮಧ್ಯಾಹ್ನದ ನಂತರ ದಾವಣಗೆರೆಯಲ್ಲಿ, ಮರುದಿನ ಬೆಳಿಗ್ಗೆ ಹಾವೇರಿ, ಮಧ್ಯಾಹ್ನ ಗದಗ, ಮೂರನೇ ದಿನ ಬೆಳಿಗ್ಗೆ ಹುಬ್ಬಳ್ಳಿ, ನಂತರ ಧಾರವಾಡ ಗ್ರಾಮೀಣ, ನಾಲ್ಕನೇ ದಿನ ಬೆಳಿಗ್ಗೆ ಬೆಳಗಾವಿ, ಮಧ್ಯಾಹ್ನ ಚಿಕ್ಕೋಡಿಯಲ್ಲಿ ತಲಾ 10 ಕಿ.ಮೀ ನಂತೆ ಯಾತ್ರೆ ಸಾಗಲಿದೆ. ಕೊನೆಯ ದಿನ ಹುಬ್ಬಳ್ಳಿಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಸಮಾವೇಶ ಆಯೋಜಿಸಲಾಗುವುದು’ ಎಂದರು.

ADVERTISEMENT

‘ಮುಂದಿನ ವರ್ಷದ ಜನವರಿಯಲ್ಲಿ ಪರಿಶಿಷ್ಟರ ಸಮಾವೇಶ ಆಯೋಜಿಸಲಿದ್ದು, ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ’ ಎಂದರು.

ಗ್ರಾಮೀಣಾಭಿವೃದ್ಧಿ ಘಟಕದ ಮುಖ್ಯಸ್ಥ ನಾರಾಯಣಸ್ವಾಮಿ ಅವರು, ‘ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಪ್ರಧಾನಿ ಸಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು. ‘ಭಾರತ ಜೋಡೊ ಯಾತ್ರೆ ಸಾಗದ ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯಲಿದೆ’ ಎಂದು ಕಾರ್ಮಿಕ ವಿಭಾಗದ ಮುಖ್ಯಸ್ಥ ಪುಟ್ಟಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.