ADVERTISEMENT

42 ಸಾವಿರ ಹೆಕ್ಟೇರ್‌ ಇಂಡೀಕರಣ; ಭೂ ಹಕ್ಕಿಗೆ ವಿಘ್ನ

ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ್ದ ಎಲ್ಲ ಅಧಿಸೂಚನೆ 6 ತಿಂಗಳ ಹಿಂದೆಯೇ ರದ್ದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 22:14 IST
Last Updated 25 ಏಪ್ರಿಲ್ 2023, 22:14 IST
ರಾಜ್ ಕಿಶೋರ್ ಸಿಂಗ್‌
ರಾಜ್ ಕಿಶೋರ್ ಸಿಂಗ್‌   

ಚಂದ್ರಹಾಸ ಹಿರೇಮಳಲಿ

ಬೆಂಗಳೂರು: ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ್ದ ಎಲ್ಲ ಅಧಿಸೂಚನೆಗಳನ್ನು 6 ತಿಂಗಳ ಹಿಂದೆ ರದ್ದುಪಡಿಸಿದ್ದ ರಾಜ್ಯ ಸರ್ಕಾರ, ಈಗ ಆರ್‌ಟಿಸಿ (ಪಹಣಿ), ಮ್ಯುಟೇಷನ್‌ಗಳಲ್ಲಿ ‘ಅರಣ್ಯ ಭೂಮಿ’ ಎಂದು ನಮೂದಿಸುವ ಇಂಡೀಕರಣ ಕೆಲಸವನ್ನು ಕೈಗೊಂಡಿದೆ.

ಅರಣ್ಯೇತರ ಚಟುವಟಿಕೆಗಳಿಗೆ 1978ರ ನಂತರ ಮಂಜೂರಾದ 42,114 ಹೆಕ್ಟೇರ್‌ ಭೂ ಪ್ರದೇಶದ ಇಂಡೀಕರಣ ಕಾರ್ಯವನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮನೆಗಳು, ಜನವಸತಿ ಗ್ರಾಮಗಳು, ಸಾಗುವಳಿ ಜಮೀನು ಸೇರಿದಂತೆ ಹಕ್ಕುಪತ್ರ, ಸಾಗುವಳಿಯ ಆರ್‌ಟಿಸಿಗಳಲ್ಲೂ ‘ಅರಣ್ಯಭೂಮಿ’ ಎಂದು ನಮೂದಾಗಲಿದೆ. ಹೀಗೆ ನಮೂದಾದ ಮನೆ, ಕೃಷಿ ಜಮೀನಿನ ಮೇಲಿನ ಒಡೆತನವನ್ನು ಜನರು ಕಳೆದುಕೊಳ್ಳಲಿದ್ದಾರೆ.

ADVERTISEMENT

ಶರಾವತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಪುನರ್ವಸತಿಗಾಗಿ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಕರ್ನಾಟಕ ಅರಣ್ಯ ಕಾಯ್ದೆ 1963ರ 28ನೇ ನಿಯಮದ ಅನ್ವಯ ದತ್ತವಾದ ಅಧಿಕಾರ ಚಲಾಯಿಸಿ, ರಾಜ್ಯ ಸರ್ಕಾರ ಅರಣ್ಯ ಭೂಮಿಯನ್ನು ಡಿ–ನೋಟಿಫಿಕೇಶನ್ ಮಾಡಿತ್ತು.  

ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಅರಣ್ಯ ಭೂಮಿಯನ್ನು ಸಂರಕ್ಷಿತ ಪ್ರದೇಶದಿಂದ ಕೈಬಿಡಲಾಗಿದೆ (ಡಿ–ನೋಟಿಫಿಕೇಶನ್). ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರಕ್ಕಿಂತ ಕಡಿಮೆ ಅರಣ್ಯ ಇದ್ದರೂ, ಇಂಡೀಕರಣ ಕಾರ್ಯ ಕೈಗೊಂಡಿಲ್ಲ ಎಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಗಿರೀಶ್‌ ಆಚಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌, ಕಂದಾಯ ಇಲಾಖೆಗೆ ಅರಣ್ಯ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಸರ್ಕಾರ 1963 ಹಾಗೂ 1980ರ ಅರಣ್ಯ ಕಾಯ್ದೆಯ ನಿಯಮಗಳನ್ನು ಪಾಲಿಸಿಲ್ಲ. ಕೇಂದ್ರದ ಅನುಮತಿ ಪಡೆಯದೇ ಡಿ–ನೋಟಿಫಿಕೇಶನ್ ಮಾಡಲಾಗಿದೆ. ಇದು ಕಾನೂನು ಬಾಹಿರ ಎಂದು ತೀರ್ಪು ನೀಡಿತ್ತು. ತೀರ್ಪಿನ ಒಂದೂವರೆ ವರ್ಷದ ನಂತರ ಸರ್ಕಾರ 1978ರಿಂದ 2019ರವರೆಗೆ ಹೊರಡಿಸಿದ್ದ 56 ಅಧಿಸೂಚನೆಗಳನ್ನು ರದ್ದುಪಡಿಸಿತ್ತು. 

ಅಧಿಸೂಚನೆ ರದ್ದಾಗಿರುವುದರಿಂದ ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಇಂಡೀಕರಣ ಮಾಡಿಕೊಡಬೇಕು ಎಂದು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಪತ್ರ ಬರೆದಿತ್ತು. ‘ಕೋರ್ಟ್‌ ಆದೇಶದ ಪ್ರಕಾರ ಅಗತ್ಯಕ್ರಮ ಕೈಗೊಂಡು ಇಡೀಕರಣ ಕಾರ್ಯ ಪೂರ್ಣಗೊಳಿಸುವಂತೆ’ ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ತಾಲ್ಲೂಕುವಾರು ಇಂಡೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.  

‘ರಾಜ್ಯ ಸರ್ಕಾರ ಅರಣ್ಯೇತರ ಚಟುವಟಿಕೆಗಳಿಗೆ ಅಧಿಸೂಚಿತ ಅರಣ್ಯದ ಭೂಮಿ ಮಂಜೂರು ಮಾಡಿದರೆ ನಿಯಮಗಳ ಅನ್ವಯ ಪರ್ಯಾಯ ಭೂಮಿ ನೀಡಬೇಕು. ಅರಣ್ಯ ಬೆಳೆಸಲು ಅನುದಾನ ನೀಡಬೇಕು. ಆದರೆ, ಆಡಳಿತ ನಡೆಸಿದ ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದು ಸಮಸ್ಯೆಯ ಮೂಲವಾಗಿದೆ’ ಎನ್ನುತ್ತಾರೆ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್.

ಭರತ್‌
ಗಿರೀಶ್‌ ಆಚಾರ್

Highlights -

ಕೋರ್ಟ್‌ ಆದೇಶದ ಪ್ರಕಾರ 56 ಅಧಿಸೂಚನೆಗಳನ್ನು ಸರ್ಕಾರ ರದ್ದು ಮಾಡಿದೆ. ಸಹಜವಾಗಿ ಅದು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಪ್ರಕ್ರಿಯೆಗಳನ್ನು ಕಂದಾಯ ಇಲಾಖೆ ಪೂರ್ಣಗೊಳಿಸುತ್ತಿದೆ.
–ರಾಜ್‌ ಕಿಶೋರ್‌ ಸಿಂಗ್ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಭೂಮಿಯ ಇಂಡೀಕರಣ ಮಾಡಿದರೆ ಸಾಲದು ನಿಯಮಬಾಹಿರವಾಗಿ ನಡೆದುಕೊಂಡ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಕ್ರಮ ಜರುಗಿಸಬೇಕು
. –ಗಿರೀಶ್‌ ಆಚಾರ್ ಪಿಐಎಲ್‌ ಸಲ್ಲಿದವರು.
ಆರ್‌ಟಿಸಿಯಲ್ಲಿ ಅರಣ್ಯಭೂಮಿ ಎಂದು ನಮೂದಿಸಿದರೆ ಜನರಿಗೆ ಭೂ ಹಕ್ಕು ಇರುವುದಿಲ್ಲ. ಲಕ್ಷಾಂತರ ಜನರು ಮತ್ತೆ ಬೀದಿಗೆ ಬೀಳುತ್ತಾರೆ. ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು.
–ಭರತ್‌ ಮೂರ್ತಿ ರಾವ್ ವಕೀಲರು ಶಿವಮೊಗ್ಗ.

ಜಿಲ್ಲೆ;ಇಂಡೀಕರಣವಾಗುವ ಭೂಮಿ (ಹೆಕ್ಟೇರ್‌ಗಳಲ್ಲಿ) ಶಿವಮೊಗ್ಗ;12086.76 ಮೈಸೂರು;12385.89 ಶಿರಸಿ;2112.92 ಚಿಕ್ಕಮಗಳೂರು;1137.37 ಧಾರವಾಡ;4037.30 ಕೊಡಗು;174.24 ಬಳ್ಳಾರಿ;1006.93 ಹಾಸನ;174.24 ಕಲಬುರಗಿ;4350.30 ಬೆಳಗಾವಿ;183.39 ದಕ್ಷಿಣ ಕನ್ನಡ;64.34 ಬೆಂಗಳೂರು;1556.29 ––––––––––––––– ಒಟ್ಟು;42114.09

ಇಂಡೀಕರಣ ಎಂದರೇನು?

ಅರಣ್ಯೇತರ ಚಟುವಟಿಕೆ ಒತ್ತುವರಿ ಮತ್ತಿತರ ಕಾರಣಗಳಿಂದ ಕೈಬಿಟ್ಟು ಹೋಗಿದ್ದ ಅರಣ್ಯಭೂಮಿಯನ್ನು ಒಟ್ಟುಗೂಡಿಸಿ ಆರ್‌ಟಿಸಿ ಮ್ಯುಟೇಷನ್‌ ಮತ್ತಿತರ ಕಂದಾಯ ದಾಖಲೆಗಳಲ್ಲಿ ಮರು ನಮೂದಿಸುವ ಪ್ರಕ್ರಿಯೆಯನ್ನು ಇಂಡೀಕರಣ ಎಂದು ಕರೆಯಲಾಗುತ್ತದೆ. ಕಂದಾಯ ಇಲಾಖೆಯಲ್ಲಿದ್ದ ಭೂ ಒಡೆತನ ಅರಣ್ಯ ಇಲಾಖೆಗೆ ಸೇರುತ್ತದೆ. ಇದರಿಂದ ಪ್ರಸ್ತುತ ಇರುವ ಅರಣ್ಯ ಭೂಮಿಯ ಖಚಿತ ವಿಸ್ತೀರ್ಣ ವ್ಯಾಪ್ತಿಯ ಮಾಹಿತಿ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.