ADVERTISEMENT

ಸಂವಿಧಾನ ಮೀರಿ ತುರ್ತು ಪರಿಸ್ಥಿತಿ ಹೇರಿಕೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 19:31 IST
Last Updated 25 ಜೂನ್ 2022, 19:31 IST
ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ  ‘ತುರ್ತು ಪರಿಸ್ಥಿತಿ: ಕಾಂಗ್ರೆಸ್‌ ಸರ್ವಾಧಿಕಾರ ಹೇರಿದ ಕರಾಳ ದಿನಕ್ಕೆ 47 ವರ್ಷ’ ಕಾರ್ಯಕ್ರಮದಲ್ಲಿ ಆಗ ಹೋರಾಟ ಮಾಡಿದವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ  ‘ತುರ್ತು ಪರಿಸ್ಥಿತಿ: ಕಾಂಗ್ರೆಸ್‌ ಸರ್ವಾಧಿಕಾರ ಹೇರಿದ ಕರಾಳ ದಿನಕ್ಕೆ 47 ವರ್ಷ’ ಕಾರ್ಯಕ್ರಮದಲ್ಲಿ ಆಗ ಹೋರಾಟ ಮಾಡಿದವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.   

ಬೆಂಗಳೂರು: ದೇಶದ ಒಳಗೆ ಅಥವಾ ಹೊರಗೆ ಯುದ್ಧದ ಸನ್ನಿವೇಶವಿದ್ದರೆ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಇಂದಿರಾ ಗಾಂಧಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಂವಿಧಾನವನ್ನು ಮೀರಿ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಶನಿವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ: ಕಾಂಗ್ರೆಸ್‌ ಸರ್ವಾಧಿಕಾರ ಹೇರಿದ ಕರಾಳ ದಿನಕ್ಕೆ 47 ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ದೇಶದ ಸಂವಿಧಾನವನ್ನೇ ದುರ್ಬಳಕೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ’ ಎಂದರು.

ತುರ್ತು ಪರಿಸ್ಥಿತಿಯ ದಿನಗಳಲ್ಲಿ ಇಂದಿರಾ ಗಾಂಧಿಯವರ ಸರ್ಕಾರ ಜನರಿಗೆ ವಿಪರೀತ ಕಿರುಕುಳ ನೀಡಿತ್ತು. ‘ನಸ್‌ಬಂದಿ’ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ದಬ್ಬಾಳಿಕೆ ನಡೆಸಿತ್ತು. ಆಗ ಇದೆಲ್ಲವನ್ನೂ ಟೀಕಿಸುತ್ತಿದ್ದ ಕೆಲವರು ಈಗ ಕಾಂಗ್ರೆಸ್‌ ಪಕ್ಷ ಸೇರಿದ ಬಳಿಕ ಅದೇ ನಾಯಕರನ್ನು ವಿಪರೀತ ಹೊಗಳುತ್ತಿದ್ದಾರೆ. ಈ ಬಗೆಯ ಆತ್ಮವಂಚನೆಯ ನಡೆಯನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದರು.

ADVERTISEMENT

ತುರ್ತು ಪರಿಸ್ಥಿತಿಯ ದಿನಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣವಾಗಿ ಹರಣವಾಗಿತ್ತು. ಆದರೆ, ಅದರ ವಿರುದ್ಧ ಜಯಪ್ರಕಾಶ್‌ ನಾರಾಯಣ ಅವರ ನೇತೃತ್ವದಲ್ಲಿ ಸೃಷ್ಟಿಯಾದ ಬಂಡಾಯ ದೇಶದಲ್ಲಿ ಒಂದು ಕ್ರಾಂತಿಗೆ ಮುನ್ನುಡಿ ಬರೆಯಿತು. ಸಾವಿರಾರು ಯುವಕರು ರಾಜಕೀಯಕ್ಕೆ ಧುಮುಕಿ ಹೊಸ ತಲೆಮಾರಿನ ನಾಯಕತ್ವ ಸೃಷ್ಟಿಯಾಯಿತು ಎಂದರು.

‘ಇಂದಿರಾ ಗಾಂಧಿಯವರ ಕಾಲದಲ್ಲಿ ಅವರ ವಿರುದ್ಧ ಮಾತನಾಡುವ ಎಲ್ಲರನ್ನೂ ಜೈಲಿಗೆ ತಳ್ಳಲಾಗಿತ್ತು. ಕಾಂಗ್ರೆಸ್‌ ನಾಯಕರೂ ಜೈಲು ಸೇರಿದ್ದರು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಸರ್ಕಾರ ಒಳ್ಳೆಯ ಕೆಲಸ ಮಾಡುವುದನ್ನೂ ವಿರೋಧಿಸುತ್ತಾರೆ’ ಎಂದು ಹೇಳಿದರು.

ಸಂಸದರಾದ ಡಿ.ವಿ. ಸದಾನಂದ ಗೌಡ, ಪಿ.ಸಿ. ಮೋಹನ್‌, ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.