ADVERTISEMENT

ಬೆಂಗಳೂರು | ಕೈಗಾರಿಕೆ ನೋಂದಣಿ ವಿಳಂಬ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 16:17 IST
Last Updated 24 ಅಕ್ಟೋಬರ್ 2025, 16:17 IST
ಉನ್ನತ ಮಟ್ಟದ ಯೋಜನಾ ಒಪ್ಪಿಗೆ ಸಮಿತಿ ಸಭೆಯಲ್ಲಿ ಶಾಲಿನಿ ರಜನೀಶ್‌, ಎಂ.ಬಿ.ಪಾಟೀಲ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ 
ಉನ್ನತ ಮಟ್ಟದ ಯೋಜನಾ ಒಪ್ಪಿಗೆ ಸಮಿತಿ ಸಭೆಯಲ್ಲಿ ಶಾಲಿನಿ ರಜನೀಶ್‌, ಎಂ.ಬಿ.ಪಾಟೀಲ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್    

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ನೋಂದಣಿಗೆ ಆಗುತ್ತಿರುವ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತ್ವರಿತಗತಿಯಲ್ಲಿ ನೋಂದಣಿಗೆ ಇರುವ ಅಡೆತಡೆಗಳನ್ನು ಕೂಡಲೇ ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ವಿಧಿಸಿದರು.

‘ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆಯ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ದಿನಗಳಲ್ಲಿ ಒಪ್ಪಿಗೆ ನೀಡಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಯೋಜನಾ ಒಪ್ಪಿಗೆ ಸಮಿತಿ ಸಭೆಯಲ್ಲಿ ಕೇಳಿದರು. ಅದಕ್ಕೆ ಅಧಿಕಾರಿಗಳು ನೀಡಿದ ಉತ್ತರಕ್ಕೆ ಮುಖ್ಯಮಂತ್ರಿ ಅತೃಪ್ತಿ ವ್ಯಕ್ತಪಡಿಸಿದರು.

‘ನೆರೆಯ ರಾಜ್ಯಗಳಲ್ಲಿ ಕೈಗಾರಿಕೆಗಳ ನೋಂದಣಿಗೆ ಕನಿಷ್ಠ 7 ದಿನಗಳಿಂದ ಗರಿಷ್ಠ 66 ದಿನಗಳು ಬೇಕಾಗುತ್ತದೆ. ನಮ್ಮಲ್ಲಿ, ಭೂಬಳಕೆ ಉದ್ದೇಶ ಬದಲಾವಣೆ, ವಿದ್ಯುತ್‌ ಸೌಲಭ್ಯ, ಮರ ಕಡಿಯಲು, ಸ್ಥಳಾಂತರಕ್ಕೆ ಒಪ್ಪಿಗೆ, ನೀರಿನ ಪೂರೈಕೆ, ಅಗ್ನಿಶಾಮಕ ಇಲಾಖೆಯ ಒಪ್ಪಿಗೆ, ಕೈಗಾರಿಕೆಗಳ ನೋಂದಣಿ ಮತ್ತು ಲೈಸೆನ್ಸ್‌, ಬಾಯ್ಲರ್‌ ನೋಂದಣಿ, ಲಿಫ್ಟ್‌ ಬಳಕೆಗೆ ಪರವಾನಗಿ ಪಡೆಯಬೇಕು. ನೆರೆಯ ರಾಜ್ಯಗಳಲ್ಲಿ ಈ ಸೇವೆಗಳನ್ನು ಕನಿಷ್ಠ 7 ದಿನಗಳಿಂದ ಗರಿಷ್ಠ 66 ದಿನಗಳಲ್ಲಿ ಒದಗಿಸಲಾಗುತ್ತಿದೆ. ನಮ್ಮಲ್ಲಿ ಕನಿಷ್ಠ 20 ರಿಂದ ಗರಿಷ್ಠ 120 ದಿನಗಳು ಹಿಡಿಯುತ್ತಿವೆ’ ಎಂದು ಅಧಿಕಾರಿಗಳು ವಿವರ ನೀಡಿದರು.

ADVERTISEMENT

ಮುಖ್ಯವಾಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆಯಿಂದ ವಿಪರೀತ ವಿಳಂಬವಾಗುತ್ತಿದೆ ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ. ಇದನ್ನು ತಪ್ಪಿಸಲು ಹೂಡಿಕೆದಾರರ ಸಮಾವೇಶದಲ್ಲಿ ಬಿಡುಗಡೆ ಮಾಡಿದ, ಮೈಕ್ರೊಸಾಫ್ಟ್‌ ಕಂಪನಿ ರೂಪಿಸಿರುವ ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅಡಿ 20 ಇಲಾಖೆಗಳ 115 ಸೇವೆಗಳನ್ನು ತರಲಾಗಿದೆ ಎಂದೂ ಅಧಿಕಾರಿಗಳು ಹೇಳಿದರು.

‘ಕರ್ನಾಟಕ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದೆ. ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆಗಳ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು’ ಎಂದು ಸಿದ್ದರಾಮಯ್ಯ ಸೂಚಿಸಿದರು.

‘ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಉತ್ತಮಪಡಿಸಲು ಕಾನೂನು ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಾದ ಭೂಬಳಕೆ ಬದಲಾವಣೆ ಪ್ರಕ್ರಿಯೆ ಸೇರಿ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿ ಕಡಿಮೆ ಮಾಡಬೇಕು. ಕಾಲಮಿತಿ ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ‘ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದಲ್ಲೇ ಅಗ್ರ ರಾಜ್ಯವನ್ನಾಗಿ ಮಾಡಲಾಗುವುದು. ರಾಜ್ಯದಲ್ಲಿ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ವಿವಿಧ ಇಲಾಖೆಗಳಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ನಿರ್ದೇಶನ ನೀಡಿ, ವರದಿ ಕೊಡುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

₹27,607 ಕೋಟಿ ಹೂಡಿಕೆಗೆ ಒಪ್ಪಿಗೆ
ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ₹27,607.26 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. ಸಭೆ ಬಳಿಕ ಮಾತನಾಡಿದ ಅವರು, ಅನುಮೋದನೆ ನೀಡಿದ ಯೋಜನೆಗಳ ಪೈಕಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಪ್ರಸ್ತಾವಗಳು ಸೇರಿವೆ. ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.