ADVERTISEMENT

ಆರು ವಿಜ್ಞಾನಿಗಳು, ಸಂಶೋಧಕರಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 16:18 IST
Last Updated 10 ಜನವರಿ 2026, 16:18 IST
<div class="paragraphs"><p>ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ</p></div>

ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

   

–ಪ್ರಜಾವಾಣಿ ಚಿತ್ರ 

ಬೆಂಗಳೂರು: ಮೂಲ–ಅನ್ವಯಿಕ ವಿಜ್ಞಾನ, ಮಾನವಿಕ ಶಾಸ್ತ್ರಗಳಲ್ಲಿ ಅಗಣಿತ ಕೆಲಸ ಮಾಡಿದ ಆರು ವಿಜ್ಞಾನಿ ಮತ್ತು ಸಂಶೋಧಕರಿಗೆ ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ವತಿಯಿಂದ 2025ನೇ ಸಾಲಿನ ಇನ್ಫೊಸಿಸ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ADVERTISEMENT

ಪ್ರಶಸ್ತಿಯು ಫಲಕ, ಚಿನ್ನದ ಪದಕ ಮತ್ತು 1 ಲಕ್ಷ ಅಮೆರಿಕನ್‌ ಡಾಲರ್‌ (ಸುಮಾರು ₹90 ಲಕ್ಷ) ಒಳಗೊಂಡಿದೆ.

ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೊಬೆಲ್‌ ಪುರಸ್ಕೃತ ಶರೀರಶಾಸ್ತ್ರಜ್ಞ ರ‍್ಯಾಂಡಿ ಸ್ಕೆಕ್‌ಮನ್‌ ಉದ್ಘಾಟಿಸಿದರು. 

‘ಮೂಲ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಈ ಹೊತ್ತಿನ ತುರ್ತು. ಮಾನವಿಕ ಶಾಸ್ತ್ರಗಳಲ್ಲೂ ಮಹತ್ವದ ಸಂಶೋಧನೆಗಳಾಗಿವೆ. ಮಾನವನ ದೈನಂದಿನ ಬದುಕನ್ನು ಬದಲಿಸಬಲ್ಲ ಸಂಶೋಧನೆಗಳು ಇವು. ಇವನ್ನು ಸಾಧಿಸಿದವರನ್ನು ಗುರುತಿಸಿದರೆ, ಇಂತಹ ಸಂಶೋಧನೆಗಳನ್ನು ಉತ್ತೇಜಿಸಿದಂತಾಗುತ್ತದೆ’ ಎಂದು ರ‍್ಯಾಂಡಿ ಸ್ಕೆಕ್‌ಮನ್‌ ‍ಪ್ರತಿಪಾದಿಸಿದರು.

ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್‌, ‘ಒಂದು ಸಮಾಜವು ಮುನ್ನಡೆಯುವಲ್ಲಿ, ಅಲ್ಲಿ ನಡೆಯುವ ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಅಂತಹ ಸಾಧನೆಗಳಲ್ಲಿ ತೊಡಗಿಕೊಂಡಿರುವವರನ್ನು ಇನ್ಫೊಸಿಸ್‌ ಸದಾ ಗುರುತಿಸಿ, ಗೌರವಿಸಲಿದೆ’ ಎಂದರು.

ಪ್ರಶಸ್ತಿ ಪುರಸ್ಕೃತರು

ಅರ್ಥಶಾಸ್ತ್ರ ವಿಭಾಗದಲ್ಲಿ ಮೆಸಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಪ್ರಾಧ್ಯಾಪಕ ನಿಖಿಲ್‌ ಅಗರ್‌ವಾಲ್‌ ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ ಟೊರಾಂಟೊ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಶಾಂತ್ ಸಹದೇವ ಸಮಾಜ ವಿಜ್ಞಾನ ವಿಭಾಗದಲ್ಲಿ ಷಿಕಾಗೊ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆ್ಯಂಡ್ರಿವ್ ಒಲೆಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೀವವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಅಂಜನಾ ಬದರಿ ನಾರಾಯಣನ್‌ ಗಣಿತೀಯ ವಿಜ್ಞಾನ ವಿಭಾಗದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ನ ಸಹಾಯಕ ಪ್ರಾಧ್ಯಾಪಕ ಸವ್ಯಸಾಚಿ ಮುಖರ್ಜಿ ಮತ್ತು ಭೌತ ವಿಜ್ಞಾನ ವಿಭಾಗದಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಪ್ರಾಧ್ಯಾಪಕ ಕಾರ್ತಿಶ್‌ ಮಂಥಿರಾಮ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.