ಪೊಲೀಸ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದ ಇನ್‌ಸ್ಪೆಕ್ಟರ್ ಎ.ವಿ.ಕುಮಾರ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲೇ ಇದ್ದು, ಅವರನ್ನು ರಕ್ಷಿಸುವ ಕೆಲಸ ಆಗುತ್ತಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಉಪಾಧ್ಯಕ್ಷ ರಘು ಜಾಣಗೆರೆ ಆರೋಪಿಸಿದರು.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಮಾರ್ ಅವರ ವಿರುದ್ಧದ ಪ್ರಕರಣ ಮಾಹಿತಿ ತಿಳಿದ ನಂತರ, ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಯೋಜಿಸಿದ್ದೆವು. ಪ್ರತಿಭಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದೆವು. ಅದನ್ನು ಗಮನಿಸಿದ್ದ ಕೆಂಗೇರಿ ವಿಭಾಗದ ಎಸಿಪಿ ಬಸವರಾಜು ಥೇಲಿ ಅವರು ನನಗೆ ಕರೆ ಮಾಡಿ, ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ಹೇಳಿದರು’ ಎಂದು ತಿಳಿಸಿದರು.
‘ಏಕೆ ಪ್ರತಿಭಟನೆ ನಡೆಸಬಾರದು’ ಎಂದು ಪ್ರಶ್ನಿಸಿದಾಗ, ‘ಲೋಕಾಯುಕ್ತ ದಾಳಿ ನಡೆದಿರುವುದು ನಿಜ. ಆದರೆ ಇನ್‌ಸ್ಪೆಕ್ಟರ್ ಕುಮಾರ್ ಅವರು ಓಡಿಹೋಗಿಲ್ಲ. ನಿನ್ನೆಯೂ ಕರ್ತವ್ಯಕ್ಕೆ ಬಂದಿದ್ದಾರೆ. ಈಗಲೂ ಕರ್ತವ್ಯದಲ್ಲೇ ಇದ್ದಾರೆ ಎಂದು ತಿಳಿಸಿದರು. ಕುಮಾರ್ ಅವರನ್ನು ಭೇಟಿ ಮಾಡಿಸಬಹುದೇ ಎಂದು ಕೇಳಿದಾಗ, ಠಾಣೆಗೆ ಬನ್ನಿ ಎಂದು ಎಸಿಪಿ ತಿಳಿಸಿದರು’ ಎಂದು ವಿವರಿಸಿದರು.
‘ಠಾಣೆಗೆ ಹೋದಾಗ ಕುಮಾರ್ ಮತ್ತು ಎಸಿಪಿ ಬಸವರಾಜು ಇದ್ದರು. ಲೋಕಾಯುಕ್ತ ದಾಳಿಯ ಬಗ್ಗೆ ವಿಚಾರಿಸಿದಾಗ, ‘ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಡಿಸಿಪಿ ಅವರ ಅನುಮತಿ ಪಡೆದು ಆ ಬಗ್ಗೆ ಮಾತನಾಡಬೇಕಾಗುತ್ತದೆ. ಇಲ್ಲವೇ ಅವರೇ ಮಾಹಿತಿ ನೀಡಬೇಕಾಗುತ್ತದೆ’ ಎಂದು ಅವರಿಬ್ಬರು ಹೇಳಿದರು’ ಎಂದು ರಘು ಜಾಣಗೆರೆ ತಿಳಿಸಿದರು.
‘ಇನ್‌ಸ್ಪೆಕ್ಟರ್ ಕುಮಾರ್ ವಿರುದ್ಧ ದೂರು ನೀಡಿದ್ದ ಚನ್ನೇಗೌಡ ಸಹ ಭೇಟಿಗೆ ನಿರಾಕರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಎಲ್ಲರೂ ಸೇರಿ ಆರೋಪಿಯನ್ನು ರಕ್ಷಿಸುತ್ತಿರುವ ಅನುಮಾನವಿದೆ. ಈ ಪ್ರಕರಣದಲ್ಲಿ ಏನಾಗುತ್ತಿದೆ ಎಂಬುದನ್ನು ಸಂಬಂಧಿತರು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.