ಹೊಸಪೇಟೆ (ವಿಜಯನಗರ): 'ನಿಜವಾದ ಕಾಯಕ ಯೋಗಿಗಳೆಂದರೆ ಮುಸ್ಲಿಮರು, ತಮ್ಮ ಕಾಯಕದಿಂದಲೇ ಇತಿಹಾಸ ಸೃಷ್ಟಿಸಿದವರು ಇದ್ದರೆ ಅದು ಮುಸ್ಲಿಮರು. ಅವರು ದಾನ ಪಡೆಯುವವರಲ್ಲ, ದಾನ ನೀಡುವವರು’ ಎಂದು ಸಂಸದ ಇ.ತುಕಾರಾಂ ಹೇಳಿದರು.
ರಾಜ್ಯ ಹಜ್ ಕಮಿಟಿ ವತಿಯಿಂದ ಇಲ್ಲಿ ಗುರುವಾರ ಆರು ಜಿಲ್ಲೆಗಳ ಹಜ್ ಯಾತ್ರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಎಲ್ಲ ಶರಣರು, ಸಂತರು, ಪ್ರವಾದಿ ಅವರು ಹೇಳಿದ್ದೆಂದರೆ ಮನುಷ್ಯಧರ್ಮ ಪಾಲಿಸಬೇಕೆಂಬ ಸಾರ್ವಕಾಲಿಕ ಸತ್ಯವನ್ನು. ಅದನ್ನು ನಾವೆಲ್ಲ ಪಾಲಿಸಬೇಕಾಗಿದೆ ಎಂದರು.
‘ನನಗೆ ಜನ್ಮ ನೀಡಿದ್ದು ತಂದೆ, ತಾಯಿ, ಆದರೆ ನನ್ನ ರಾಜಕೀಯ ಜೀವನಕ್ಕೆ ನೀವೆಲ್ಲ ತಂದೆ, ತಾಯಿಗಳು, ನಿಮ್ಮ ಒಲುಮೆ, ಬೆಂಬಲದಿಂದಲೇ ನಾನು ಇಂದು ಸಂಸದನಾಗಿದ್ದೇನೆ, ನನ್ನ ಪತ್ನಿ ಶಾಸಕಿ ಆಗಿದ್ದಾಳೆ. ನಿಮ್ಮ ಪರವಾಗಿ ನಾನು ಸದಾ ಧ್ವನಿ ಎತ್ತುತ್ತೇನೆ’ ಎಂದು ತುಕಾರಾಂ ಹೇಳಿದರು.
ಕೊನೆಯಲ್ಲಿ ಸಭಿಕರೊಬ್ಬರು ವಕ್ಫ್ ಕಾಯ್ದೆ ವಿರುದ್ಧ ನೀವು ಧ್ವನಿ ಎತ್ತಬೇಕು ಎಂದು ಹೇಳಿದಾಗ, ‘ವಕ್ಪ್ ತಿದ್ದುಪಡಿ ಕಾಯ್ದೆ ವಿರುದ್ಧ ನಾನೂ ಮತ ಚಲಾಯಿಸಿದ್ದೇನೆ, ಅರ್ಥವಾಯಿತೇ?’ ಎಂದು ಹೇಳಿ, ‘ರಾಷ್ಟ್ರೀಯ ಪಕ್ಷ ಎಂದಾಗ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗಷ್ಟೇ ಮಾತನಾಡುವ ಅವಕಾಶ ಇರುತ್ತದೆ, ಹೀಗಿದ್ದರೂ ನಿಮ್ಮ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸ ನಾನು ಮಾಡುವುದಿಲ್ಲ, ನಿಮ್ಮ ಪರವಾಗಿ ನಾನು ಸದಾ ಇರುತ್ತೇನೆ’ ಎಂದರು.
ಖಬರ್‌ಸ್ತಾನಕ್ಕೆ ₹50 ಲಕ್ಷ: ಜಿಲ್ಲೆಯಲ್ಲಿರುವ ಖಬರಸ್ತಾನಗಳಿಗೆ ಸಂಸದರ ನಿಧಿಯಿಂದ ₹50 ಲಕ್ಷ ಒದಗಿಸಬೇಕು ಎಂಬ ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ದಾದಾಪೀರ್ ಅವರ ಬೇಡಿಕೆಗೆ ಸ್ಪಂದಿಸಿದ ಸಂಸದ ತುಕಾರಾಂ, ಅದನ್ನು ಒದಗಿಸುವುದಾಗಿ ತಿಳಿಸಿದರು.
ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಜುಲ್ಫಿಕರ್ ಅಹ್ಮದ್ ಖಾನ್ ಮಾತನಾಡಿ, ಹಜ್ ಯಾತ್ರೆಯ ವೇಳೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಿಂದ ಈ ಬಾರಿ 8,600ರಷ್ಟು ಮಂದಿ ಹಜ್ ಯಾತ್ರೆ ಕೈಗೊಳ್ಳಲಿರುವುದನ್ನು ಅವರು ತಿಳಿಸಿದರು.
‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಯಮ್ಮದ್ ಇಮಾಮ್ ನಿಯಾಜಿ, ಹಜ್ ಕಮಿಟಿ ಮಾಜಿ ಅಧ್ಯಕ್ಷ ದಾದಾ ಸಾಹೇಬ್, ನಗರಸಭಾ ಸದಸ್ಯ ಅಸ್ಲಂ ಮಾಳಗಿ, ಅಂಜುಮನ್ ಕಮಿಟಿಯ ಅನ್ಸಾರ್ ಬಾಷಾ, ಡಾ.ದರ್ವೇಶ್, ಫಿರೋಜ್ ಖಾನ್, ವಕೀಲ ಮೊಹಿಸೀನ್, ಗುಲಾಮ್ ರಸೂಲ್, ಅಬೂಬಕರ್ ಇತರರು ಇದ್ದರು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲದೆ, ರಾಯಚೂರು, ಕೊಪ್ಪಳ, ಗದಗ, ಚಿತ್ರದುರ್ಗ ಜಿಲ್ಲೆಗಳಿಂದ ಹಜ್ ಯಾತ್ರಿ ಆಕಾಂಕ್ಷಿಗಳು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.