ADVERTISEMENT

ವರ್ಷಾಂತ್ಯಕ್ಕೆ 3 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಕೆ: ಬೊಮ್ಮಾಯಿ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:42 IST
Last Updated 14 ಸೆಪ್ಟೆಂಬರ್ 2021, 19:42 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದ ಅಂತ್ಯದೊಳಗೆ 3 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಆರ್‌.ಮಂಜುನಾಥ್‌ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಬೀದಿ ದೀಪ ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಿ ಎರಡು ವರ್ಷಗಳು ಆಗಿವೆ. ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಯಲ್ಲಿ ಪ್ರಗತಿ ಆಗಿಲ್ಲ. ಇದರಿಂದಾಗಿ ನಗರದಲ್ಲಿ ಸಾಕಷ್ಟು ಕತ್ತಲು ಪ್ರದೇಶಗಳು ನಿರ್ಮಾಣವಾಗಿವೆ’ ಎಂದು ಹೇಳಿದರು.

‘ನಗರದಲ್ಲಿ ಈಗಿರುವ ಸೋಡಿಯಂ ದೀಪಗಳ ಬದಲು ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕೊ) ಗುತ್ತಿಗೆ ನೀಡಲಾ
ಗಿದೆ. ಐದು ಹಂತಗಳಲ್ಲಿ 30 ತಿಂಗಳ ಅವಧಿಯಲ್ಲಿ 4.85 ಲಕ್ಷ ಬೀದಿದೀಪ ಅಳವಡಿಸಬೇಕಿದೆ. ಮೊದಲ ಹಂತದಲ್ಲಿ
1 ಲಕ್ಷ ಬೀದಿದೀಪಗಳನ್ನು ಅಳವಡಿಸಲು ರಾಜರಾಜೇಶ್ವರಿನಗರ, ದಾಸರಹಳ್ಳಿ ವಲಯ, ಬೊಮ್ಮನಹಳ್ಳಿ ವಲಯಗಳ ಮೂರು ವಾರ್ಡ್‌ಗಳು ಹಾಗೂ ಪೂರ್ವ ವಲಯದ ಒಂದು ವಾರ್ಡ್ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡು, ಬೇಸ್‌ಲೈನ್‌ ಸರ್ವೆ ಕಾರ್ಯಗಳು ಬಹುತೇಕ ಮುಗಿದಿವೆ’ ಎಂದರು.

ADVERTISEMENT

ಆರ್‌.ಮಂಜುನಾಥ್‌, ‘ಒಪ್ಪಂದ ಮಾಡಿಕೊಂಡು 30 ತಿಂಗಳುಗಳು ಕಳೆದಿವೆ. ಆದರೆ, ಯೋಜನೆಗೆ ಚಾಲನೆ ಸಿಕ್ಕಿಲ್ಲ. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ₹21.50 ಕೋಟಿಯಂತೆ ಒಟ್ಟು ₹642 ಕೋಟಿ ನಷ್ಟ ಉಂಟಾಗಿದೆ. ಜತೆಗೆ, ಬೀದಿದೀಪಗಳ ವಿದ್ಯುತ್‌ ಶುಲ್ಕ ₹128 ಕೋಟಿಯನ್ನು ಬಿಬಿಎಂಪಿ ‍ಪಾವತಿಸುತ್ತಿದೆ. ಗುತ್ತಿಗೆದಾ ರರ ವಿಳಂಬ ನೀತಿಯಿಂದ ಪಾಲಿಕೆಗೆ ಹೊರೆ
ಯಾಗಿದೆ’ ಎಂದು ಗಮನ ಸೆಳೆದರು. ‘ನನ್ನ ಕ್ಷೇತ್ರದ ಕೈಗಾರಿಕೆಗಳಲ್ಲಿ 7 ಲಕ್ಷ ಮಂದಿ ದುಡಿಯುತ್ತಿದ್ದಾರೆ. 2 ವರ್ಷಗಳಿಂದ ಬೀದಿದೀಪಗಳನ್ನು ಅಳವಡಿಸಿಲ್ಲ. ಇದರಿಂದಾಗಿ, ನೌಕರರಿಗೆ ಮನೆಗೆ ತೆರಳಲು ಸಮಸ್ಯೆ ಆಗುತ್ತಿದೆ’ ಎಂದರು.

‘ಗುತ್ತಿಗೆದಾರ ಕಂಪನಿ ಯೋಜನೆ ಅನುಷ್ಠಾನ ವಿಳಂಬ ಮಾಡಿದರೆ ದಂಡ ಹಾಕಲು ಅವಕಾಶ ಇದೆಯೇ’ ಎಂದು ಮಂಜುನಾಥ್‌ ಪ್ರಶ್ನಿಸಿದರು. ಉತ್ತರಿಸಿದ ಬಸವರಾಜ ಬೊಮ್ಮಾಯಿ, ‘ಯೋಜನೆಯ ಪ್ರತಿ ವಾರದ ವಿಳಂಬಕ್ಕೆ ₹1 ಲಕ್ಷ ದಂಡ ವಿಧಿಸಲು ಅವಕಾಶ ಇದೆ. ಜತೆಗೆ, ಗುತ್ತಿಗೆದಾರರನ್ನು ಬದಲಿಸಲು ಹಿಂಜರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ‘3 ವರ್ಷಗಳಿಂದ ಜಾಗತಿಕ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಗುತ್ತಿಗೆದಾರ ಕಂಪನಿ ಎಲ್‌ಇಡಿ ದೀಪಗಳನ್ನು ಅಳವಡಿಸಿಲ್ಲ. ಬೇರೆ ಬೀದಿದೀಪಗಳನ್ನು ಪಾಲಿಕೆ ಹಾಕುತ್ತಿಲ್ಲ’ ಎಂದರು. ‘ಬಸವನಗುಡಿ ಕ್ಷೇತ್ರದಲ್ಲೂ ಇದೇ ಸಮಸ್ಯೆ ಆಗಿದೆ’ ಎಂದು ಬಿಜೆಪಿಯ ಎಲ್.ಎ.ರವಿಸುಬ್ರಹ್ಮಣ್ಯ ಹೇಳಿದರು.

ಬಿಜೆಪಿಯ ಅರವಿಂದ ಲಿಂಬಾವಳಿ, ‘ನಗರದ ಹೊರವಲಯದಲ್ಲಿ 14 ಕ್ಷೇತ್ರಗಳು ಇವೆ. ಇಲ್ಲಿನ 110 ಹಳ್ಳಿಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಜತೆಗೆ, ಬೀದಿದೀಪ ಇಲ್ಲದೆ ಸಾಕಷ್ಟು ಮಂದಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.