ADVERTISEMENT

ಸಂಪುಟ ವಿಸ್ತರಣೆ: ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 8:55 IST
Last Updated 30 ಜುಲೈ 2021, 8:55 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ನವದೆಹಲಿ: ಕೊರೊನಾ ಹರಡದಂತೆ ಕ್ರಮ‌ ಕೈಗೊಳ್ಳುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಗಳದ್ದಾಗಿದೆ.‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಈ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಂಪುಟ ವಿಸ್ತರಣೆಯು ನನ್ನ ಮೊದಲ ಆದ್ಯತೆಯಾಗಿದೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚೆ‌ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ಭವನದಲ್ಲಿ ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಂದ ರೈಲಿನ ಮೂಲಕ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

'ಕೊರೊನಾ‌ ನಿಯಂತ್ರಣಕ್ಕೆ‌ ಸಂಬಂಧಿಸಿದ ಹಲವು ಜಿಲ್ಲಾಧಿಕಾರಿಗಳ ಜೊತೆಗೆ ಈಗಾಗಲೇ ಮಾತನಾಡಿದ್ದೇನೆ. ಗಡಿ ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ವಿಡಿಯೊ ಕಾನ್ಫರನ್ಸ್ ಮೂಲಕ ಚರ್ಚೆ ನಡೆಸಿ, 3ನೇ ಅಲೆ ಬಾರದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡುವೆ' ಎಂದು ಅವರು ಹೇಳಿದರು.

'ಉತ್ತರ ಕರ್ನಾಟಕದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಅಹವಾಲು ಸ್ವೀಕರಿಸುವೆ. ಸಂತ್ರಸ್ತರಿಗೆ ನೆರವು ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸುವೆ' ಎಂದು ಅವರು ಹೇಳಿದರು.

ಸುಳ್ಳಿನ ಕಂತೆ: ಕಳೆದ ಎರಡು ವರ್ಷಗಳ ಅವಧಿಯಲ್ಲಿನ ರಾಜ್ಯದ‌ ಬಿಜೆಪಿ ಸರ್ಕಾರದ ಸಾಧನೆ‌ ಶೂನ್ಯ. ಹಾಗೂ ಭ್ರಷ್ಟಾಚಾರದ ಕೂಪ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ‌ ಪ್ರತಿಕ್ರಿಯಿಸಿದ ಅವರು, ಅದೊಂದು ಸುಳ್ಳಿನ ಕಂತೆ ಎಂದರು.

ಸಂಪುಟ ವಿಸ್ತರಣೆ: 'ಸಂಪುಟ ವಿಸ್ತರಣೆಯು ನನ್ನ ಮೊದಲ ಆದ್ಯತೆಯಾಗಿದೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚೆ‌ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಬೆಳಿಗ್ಗೆ 11 ಗಂಟೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್, ಮಧ್ಯಾಹ್ನ 12ಕ್ಕೆ ಕೇಂದ್ರದ ಗೃಹ ಸಚಿವ‌ ಅಮಿತ್ ಶಾ, ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸುವೆ' ಎಂದು ಅವರು ತಿಳಿಸಿದರು.

ಸಂಸದರ ಸಭೆ: ರಾಜ್ಯದ ಸಂಸದರೊಂದಿಗೆ‌ ಮಧ್ಯಾಹ್ನ 1ಕ್ಕೆ ಸಭೆ ನಡೆಸಿ, ಸಂಸತ್ ಅಧಿವೇಶನದಲ್ಲಿ ಸಮಸ್ಯೆಗಳ ಕುರಿತು ಗಮನ ಸೆಳೆಯುವಂತೆ ಸೂಚಿಸಲಾಗುವುದು‌ ಎಂದು ಮುಖ್ಯಮಂತ್ರಿ ಹೇಳಿದರು.

ಕೇಂದ್ರದ ಜಲಶಕ್ತಿ ಸಚಿವ‌ ಗಜೇಂದ್ರ ಸಿಂಗ್‌ ಶೆಖಾವತ್ ಅವರನ್ನು ಶನಿವಾರ‌ ಭೇಟಿ ಮಾಡಿ ರಾಜ್ಯದ ನೀರಾವರಿ ಸಮಸ್ಯೆಗಳ ನಿವಾರಣೆಗೆ ಮನವಿ‌‌ ಸಲ್ಲಿಸಲಾಗುವುದು ಎಂದು‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.