ADVERTISEMENT

ಅಂತರರಾಜ್ಯ ಜಲ ವಿವಾದ: ಅಗತ್ಯಬಿದ್ದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 20:14 IST
Last Updated 18 ಮಾರ್ಚ್ 2022, 20:14 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ದೆಹಲಿಗೆ ತೆರಳಿ ರಾಜ್ಯ ಎಲ್ಲ ಜಲ ವಿವಾದಗಳ ಕುರಿತು ಕೇಂದ್ರದ ಸಚಿವರ ಜತೆ ಚರ್ಚೆ ನಡೆಸುತ್ತೇನೆ. ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಂತರರಾಜ್ಯ ಜಲ ವಿವಾದಗಳ ಕುರಿತು ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ವಪಕ್ಷ ನಾಯಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ಮೇಕೆದಾಟು ಯೋಜನೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಈ ಯೋಜನೆಗೆ ಆದಷ್ಟು ಶೀಘ್ರ ಪರಿಸರ ಇಲಾಖೆಯಿಂದ ಅನುಮತಿ ಸಿಗುವ ವಿಶ್ವಾಸ ಇದೆ’ ಎಂದರು.

‘ಜಲ ಯೋಜನೆಗಳಿಗೆ ವೇಗ ಕೊಡುವ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ಜತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಸಭೆಯಲ್ಲಿ ಅಂತರರಾಜ್ಯ ನದಿ ಜೋಡಣೆ ಬಗ್ಗೆಯೂ ಚರ್ಚೆ ಆಗಿದೆ. ನಮ್ಮ ರಾಜ್ಯದ ಪಾಲು ಪಡೆದ ಬಳಿಕ ನದಿ ಜೋಡಣೆಗೆ ಒಪ್ಪುತ್ತೇವೆ. ಈ ನಿಲುವು ನಮ್ಮದು. ಇದನ್ನೇ ಕೇಂದ್ರದ ಮುಂದಿಡುತ್ತೇವೆ. ನದಿ ಜೋಡಣೆ ಯೋಜನೆಯ ತಾಂತ್ರಿಕ‌ ಅಂಶಗಳನ್ನು ಕೇಂದ್ರದಿಂದ ಆದಷ್ಟು ಬೇಗ ಪಡೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಮೇಕೆದಾಟು ಯೋಜನೆಯ ಡಿಪಿಆರ್‌ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಇದೆ. ಇದರ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಾಧಿಕಾರದ ಸಭೆಯ ನಡಾವಳಿಯಲ್ಲಿ ಏನಿದೆ ಎಂಬ ಮಾಹಿತಿ ಕೇಳಿದ್ದೇವೆ. ಮುಂದಿನ‌ ಸೋಮವಾರ ಅಥವಾ ಮಂಗಳವಾರ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ದೆಹಲಿಗೆ ತೆರಳಿ, ಇಂದಿನ ಸಭೆಯ ಸಭೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಿದ್ದಾರೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಾವು ಒತ್ತಾಯ ಮಾಡಿದ ಬಳಿಕ ಜಲ ವಿವಾದಗಳ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೃಷ್ಣಾ ಕೊಳ್ಳದ ಬಗ್ಗೆ ಚರ್ಚೆ ಆಗಿದೆ. ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಪ್ರಧಾನಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಲು ಒತ್ತಾಯಿಸಿದ್ದೇವೆ’ ಎಂದರು.

‘ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಮುಖ್ಯಮಂತ್ರಿ ಒಪ್ಪಿ‌ದ್ದಾರೆ. ಯಾವಾಗ ಎಂಬ ಬಗ್ಗೆ ತಿಳಿಸುವುದಾಗಿಯೂ ಹೇಳಿದ್ದಾರೆ’ ಎಂದರು.

’ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ನಾನು, ಡಿ.ಕೆ. ಶಿವಕುಮಾರ್‌ ಮತ್ತು ಬಿ.ಕೆ. ಹರಿಪ್ರಸಾದ್ ಸ್ಪಷ್ಟವಾಗಿ ಹೇಳಿದ್ದೇವೆ. ಡಬಲ್ ಎಂಜಿನ್ ಸರ್ಕಾರ ಈ ಕೆಲಸ ಮಾಡಬಹುದಲ್ಲವೇ? ಕೇಂದ್ರಕ್ಕೆ ಒಂದು ನಿಯೋಗ ಹೋಗಬೇಕು ಎಂದೂ ಹೇಳಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಕೈಗೆತ್ತಿಕೊಳ್ಳಬೇಕು. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅನುಮತಿ ಬೇಕು’ ಎಂದು ಪ್ರಶ್ನಿಸಿದರು.

’ಮೇಕೆದಾಟು ಯೋಜನೆ ಕುರಿತು ಪರಿಸರ ಇಲಾಖೆ ಅನುಮತಿ ಪಡೆಯಲು ಒತ್ತಾಯಿಸಿದ್ದೇವೆ. ಮಹದಾಯಿ ವಿಚಾರದಲ್ಲೂ ಪರಿಸರ ಇಲಾಖೆ ಅನುಮೋದನೆ ಪಡೆಯಲು ಮುಂದಾಗಬೇಕೆಂದು ಒತ್ತಾಯಿಸಿದ್ದೇವೆ. ಮೇಕೆದಾಟು ಪಾದಯಾತ್ರೆ ವೇಳೆ ಕಾಂಗ್ರೆಸ್ ನಾಯಕರ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಲು ಒತ್ತಾಯಿಸಿದ್ದೇವೆ. ಕೇಸ್ ವಾಪಸ್ ಪಡೆಯುತ್ತೇವೆ’ ಎಂದೂ ಹೇಳಿದ್ದಾರೆ.

‘ಮೇಕೆದಾಟು ವಿಚಾರದಲ್ಲಿ ನಮ್ಮ ಹೋರಾಟ ಪರಿಗಣಿಸಿ ಬಜೆಟ್‌ನಲ್ಲಿ ಹಣ ಇಟ್ಟಿದ್ದಾರೆ. ಯೋಜನೆ ಅಗತ್ಯತೆ ಕುರಿತು ಸಭೆಯಲ್ಲಿ ತಿಳಿಸಿದ್ದೇವೆ. ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಹೇಳಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಎಲ್ಲರೂ ಒಂದಾಗಿ ಮುಖ್ಯಮಂತ್ರಿ ಬಳಿ ಎಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ. ಮೇಕೆದಾಟು, ಕೃಷ್ಣಾ ನದಿ ಜೋಡಣೆ ಬಗ್ಗೆ ಚರ್ಚೆಯಾಗಿದೆ. ಮುಖ್ಯಮಂತ್ರಿಗೆ ಪೂರ್ಣ ಅಧಿಕಾರ ನೀಡಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಜೆಡಿಎಸ್‌ ನಾಯಕ ಬಂಡೆಪ್ಪ ಕಾಶೆಂಪುರ ಹೇಳಿದರು.

*
ಮೇಕೆದಾಟು ಯೋಜನೆಗೆ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪರಿಸರ ಸಚಿವಾಲಯದ ಅನುಮೋದನೆ ಪಡೆಯಲು ಕ್ರಮ ವಹಿಸಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ರಾಜ್ಯದ ಜಲ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನಿಯೋಗ ಕರೆದೊಯ್ದು ಒತ್ತಡ ಹಾಕುವಂತೆ ಎಂದು ನಾವು ಹೇಳಿದ್ದೇವೆ. ಸರ್ಕಾರ ನಮ್ಮ ನಿಲುವನ್ನು ಒಪ್ಪಿದೆ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.