ADVERTISEMENT

ಒಳಮೀಸಲಾತಿ: 101 ಜಾತಿ ಸಮೀಕ್ಷೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 23:30 IST
Last Updated 16 ಏಪ್ರಿಲ್ 2025, 23:30 IST
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಕುರಿತ ಸಭೆ ನಡೆಯಿತು. ಮಾಜಿ ಸಚಿವ ಎಚ್.ಆಂಜನೇಯ, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಮತ್ತು ಇತರರು ಇದ್ದರು.
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಕುರಿತ ಸಭೆ ನಡೆಯಿತು. ಮಾಜಿ ಸಚಿವ ಎಚ್.ಆಂಜನೇಯ, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಮತ್ತು ಇತರರು ಇದ್ದರು.   

ಬೆಂಗಳೂರು: ಒಳಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸಲು 54 ಸಾವಿರ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ನಿಗದಿ ಸಮಯದಲ್ಲಿ ಪೂರ್ಣಗೊಳಿಸಲು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿದ ಅವರು, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರನ್ನು ಈ ಕಾರ್ಯದ ಉಸ್ತುವಾರಿಯನ್ನಾಗಿ ಪ್ರಕಟಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮುನಿಯಪ್ಪ ಅವರು,101 ಜಾತಿಗಳಿಗೆ ಅನ್ಯಾಯ ಆಗದಂತೆ ಯಾವ ರೀತಿ ಒಳ ಮೀಸಲಾತಿ ನೀಡಬೇಕು ಎಂಬ ಕುರಿತು ಚರ್ಚಿಸಲಾಯಿತು. ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಕುರಿತು ಇರುವ ಗೊಂದಲ ನಿವಾರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಯಿತು ಎಂದರು.

ADVERTISEMENT

ಎರಡು ತಿಂಗಳಲ್ಲಿ ವರದಿ ಪಡೆಯಲು ಸೂಚಿಸಿದ್ದು, ಈಗಾಗಲೇ 15 ದಿನಗಳು ಕಳೆದಿದೆ. ತ್ವರಿತಗತಿಯಲ್ಲಿ ಮತ್ತು ಕಾಲ ಮಿತಿಯಲ್ಲಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.

ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ ಆಯೋಗವು ಮಾರ್ಚ್‌ನಲ್ಲಿ ಮಧ್ಯಂತರ ವರದಿ ಸಲ್ಲಿಸಿ, ಒಳಮೀಸಲಾತಿ ನೀಡುವುದಕ್ಕಾಗಿ ಪರಿಶಿಷ್ಟ ಜಾತಿಯಲ್ಲಿನ 101 ಉಪಜಾತಿಗಳ ದತ್ತಾಂಶ ಸಂಗ್ರಹಿಸುವುದಕ್ಕೆ ಹೊಸ ಸಮೀಕ್ಷೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು.

ಒಳಮೀಸಲಾತಿ ವರ್ಗೀಕರಣವನ್ನು ತ್ವರಿತವಾಗಿ ಮತ್ತು ವೈಜ್ಞಾನಿಕವಾಗಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್‌ದಾಸ್‌ ಆಯೋಗಕ್ಕೇ ವಹಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿತ್ತು. ಸಮೀಕ್ಷಾ ಕಾರ್ಯವನ್ನು 60 ದಿನಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಗಿತ್ತು. 

ಸಭೆಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಸಮಾಜಕಲ್ಯಾಣ ಇಲಾಖೆ ಪ್ರಧಾನಕಾರ್ಯದರ್ಶಿ ಪಿ. ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ್‌, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ ಬೀಮಪ್ಪ, ತೇಗನೂರು, ಭೀಮಾಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.