ಎಚ್.ಸಿ.ಮಹದೇವಪ್ಪ
ಬೆಂಗಳೂರು: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಒಳ ಮೀಸಲಾತಿ ಕುರಿತ ವರದಿಗೆ ಸಚಿವ ಸಂಪುಟ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ ಬಲಗೈ ಸಮುದಾಯದ ಹಿರಿಯ ಸಚಿವರು ವರದಿ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಷಯವಾಗಿ, ಸುಮಾರು ಅರ್ಧ ಗಂಟೆ ಏರಿದ ಧ್ವನಿಯಲ್ಲಿ ಮಾತಿನ ಸಮರ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನೀವೆಲ್ಲರೂ ವರದಿಯನ್ನು ಆಳವಾಗಿ ಅಧ್ಯಯನ ಮಾಡಿಕೊಂಡು ಬನ್ನಿ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸೋಣ. ಆ ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳೋಣ’ ಎಂದು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.
ಆಯೋಗದ ವರದಿಯ ಪ್ರತಿಗಳನ್ನು ಹಂಚಿದ ತಕ್ಷಣವೇ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಆಕ್ಷೇಪ ವ್ಯಕ್ತಪಡಿಸಿದರು.‘ವರದಿ ಜಾರಿಗೊಂಡರೆ ಬಲಗೈ ಸಮುದಾಯದ ಜಾತಿಗಳಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ಕೊಡವುದಿಲ್ಲ’ ಎಂದು ಸಚಿವರು ಏರಿದ ಧ್ವನಿಯಲ್ಲಿ ಪ್ರತಿಪಾದಿಸಿದ್ದಾಗಿ ಗೊತ್ತಾಗಿದೆ.
‘ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಜಾತಿಯನ್ನು ಪ್ರತ್ಯೇಕ ವರ್ಗೀಕರಣ ಮಾಡಿ ಶೇ 1ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ. ಇದರಿಂದಾಗಿ 100 ಜನರಿಗೆ ಆದ ಮೇಲೆ ನಮಗೆ ಅವಕಾಶ ಸಿಗುತ್ತದೆ. ಈ ಜಾತಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕು. ನಮ್ಮ ಸಮುದಾಯದ ಸಂಖ್ಯೆ ಹೆಚ್ಚಿದೆ. ಇದನ್ನು ವರದಿಯಲ್ಲಿ ಕಡೆಗಣಿಸಲಾಗಿದೆ. ಇದರಿಂದ ಅನ್ಯಾಯವಾಗಿದೆ’ ಎಂದು ಮಹದೇವಪ್ಪ ಅವರು ಗುಡುಗಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಡಗೈ ಸಮುದಾಯದ ಪ್ರತಿನಿಧಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ‘ಇಷ್ಟು ವರ್ಷ ಸ್ಪೃಶ್ಯ ಸಮಾಜದವರೇ ಮೀಸಲಾತಿಯ ಹೆಚ್ಚಿನ ಪ್ರಯೋಜನ ಪಡೆದುಕೊಂಡು ಬಂದಿದ್ದಾರೆ. ಅಸ್ಪೃಶ್ಯ ಜಾತಿಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಾ ಬಂದಿದೆ. ಈಗಲೂ ನಮಗೆ ನ್ಯಾಯ ಸಿಗದಿದ್ದರೆ, ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು’ ಎಂದು ಮೂಲಗಳು ಹೇಳಿವೆ. ಬಲಗೈ ಸಮುದಾಯದ ಸಚಿವರ ಅಬ್ಬರದ ಮುಂದೆ ಮುನಿಯಪ್ಪ ತಾವು ಹೇಳಬೇಕಾಗಿದ್ದನ್ನು ಪೂರ್ಣವಾಗಿ ಹೇಳಲು ಸಾಧ್ಯವಾಗಲಿಲ್ಲ ಎಂದೂ ಗೊತ್ತಾಗಿದೆ.
‘ಬಲಗೈ ಸಮುದಾಯ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ. ಕಳೆದ ಚುನಾವಣೆಯಲ್ಲಿ ಈ ಸಮುದಾಯ ಗಟ್ಟಿಯಾಗಿ ನಮ್ಮ ಜತೆ ನಿಂತ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು ಬರಲು ಸಾಧ್ಯವಾಗಿದೆ. ಈ ಸಮುದಾಯದ ಹಕ್ಕು ಕಿತ್ತುಕೊಳ್ಳಬಾರದು. ಹೀಗಾಗಿ ವರದಿಗೆ ಒಪ್ಪಿಗೆ ನೀಡಬಾರದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
16ರಂದು ವಿಶೇಷ ಸಚಿವ ಸಂಪುಟ ಸಭೆ
‘ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ಸ್ವೀಕರಿಸಿದೆ. ಇದೇ 16ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲು
ನಿರ್ಧರಿಸಲಾಗಿದೆ‘ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
‘ನಾಗಮೋಹನ್‌ದಾಸ್ ಅವರು ಶ್ರಮವಹಿಸಿ, ಅತಿ ಕಡಿಮೆ ಅವಧಿಯಲ್ಲಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಈ ಸಮುದಾಯಗಳ ಶೇ 92ರಷ್ಟು ಜನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಈ ವರದಿಯ ಪ್ರತಿಗಳನ್ನು ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ವಿತರಿಸಲಾಗಿದೆ. ವಿಶೇಷ ಸಂಪುಟ ಸಭೆಗೆ ಎಲ್ಲರೂ ಅಧ್ಯಯನ ಮಾಡಿಕೊಂಡು ಬಂದು ಚರ್ಚೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮೀಕ್ಷೆಗೆ ಹೊಸ ತಂತ್ರಾಂಶ, ಹಳೇ ಮತದಾರರ ಪಟ್ಟಿ
ಈ ಬಾರಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಡಿಜಿಟಲ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಇ– ಆಡಳಿತ ಇಲಾಖೆಯ ಮೂಲಕವೇ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿ ಉಪಯೋಗಿಸಿದ್ದಾರೆ. ಅದೇ ರೀತಿಯಾಗಿ ಹಿಂದುಳಿದವರ ವರ್ಗಗಳ ಆಯೋಗವು ನಡೆಸುವ ಸಮೀಕ್ಷೆಗೂ ಸಾರ್ವಜನಿಕವಾಗಿ ಲಭ್ಯವಿರುವ (ಲೋಕಸಭಾ ಚುನಾವಣೆಗೆ ಬಳಸಿದ) ಚುನಾವಣಾ ಮತದಾರರ ಪಟ್ಟಿಯನ್ನೇ ಉಪಯೋಗಿಸಿಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
‘ಲೋಕಸಭಾ ಚುನಾವಣಾ ಮತದಾರರ ಪಟ್ಟಿಯ ಬಗ್ಗೆ ರಾಹುಲ್‌ಗಾಂಧಿ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವಾಗ, ಅದೇ ಪಟ್ಟಿಯನ್ನು ಸಮೀಕ್ಷೆಗೆ ಬಳಸುತ್ತಿರುವುದು ಸರಿಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮತದಾರರ ಪಟ್ಟಿಯ ಬಗ್ಗೆ ಅನುಮಾನ ಬಂದರೆ ಪರಿಶೀಲನೆಗೆ ಒಳಪಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.