ADVERTISEMENT

ಪದ್ಮ ಪ್ರಶಸ್ತಿ ಪಡೆದವರ ಪರಿಚಯ: ಸಾಧನೆಯ ಹಿರಿಮೆಗೆ ಪ್ರಶಸ್ತಿ ತುರಾಯಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 20:23 IST
Last Updated 25 ಜನವರಿ 2025, 20:23 IST
<div class="paragraphs"><p>ಭೀಮವ್ವ ಶಿಳ್ಳೇಕ್ಯಾತರ</p></div>

ಭೀಮವ್ವ ಶಿಳ್ಳೇಕ್ಯಾತರ

   

ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ಹಿರಿಯ ನಟ ಅನಂತನಾಗ್, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಎ. ಸೂರ್ಯಪ್ರಕಾಶ್

ADVERTISEMENT

ಅರಕಲಗೂಡಿನವರು; ಪತ್ರಕರ್ತರು ಮತ್ತು ಲೇಖಕರು. ಸಮಾಜಶಾಸ್ತ್ರದಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಪ್ರಸಾರ ಭಾರತಿಯ ಅಧ್ಯಕ್ಷರೂ ಆಗಿದ್ದರು. ‘ಇಂಡಿಯನ್‌ ಎಕ್ಸ್‌ಪ್ರೆಸ್‌’, ‘ದಿ ಪಯನಿಯರ್’, ‘ಈ ನಾಡು’ ಮತ್ತು ‘ಜೀ ನ್ಯೂಸ್‌’ನಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಸದ್ಯ ಪ್ರಧಾನ ಮಂತ್ರಿಗಳ ಮ್ಯೂಸಿಯಂನ ನಿರ್ದೇಶಕರಾಗಿದ್ದಾರೆ. ‘ಡೆಮಾಕ್ರಸಿ, ಪಾಲಿಟಿಕ್ಸ್‌ ಅ್ಯಂಡ್‌ ಗರ್ವ್‌ನೆನ್ಸ್‌’, 'ಪಬ್ಲಿಕ್‌ ಮನಿ ಅ್ಯಂಡ್‌ ಪ್ರೈವೇಟ್‌ ಅಜೆಂಡಾ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ತುಮಕೂರು ವಿಶ್ವವಿದ್ಯಾಲಯವು ಡಿ.ಲಿಟ್‌. ಪದವಿಯನ್ನು ನೀಡಿ ಗೌರವಿಸಿದೆ. ಪ್ರಜಾವಾಣಿಯಲ್ಲಿ ‘ಸೂರ್ಯನಮಸ್ಕಾರ‘ ಅಂಕಣವನ್ನು ಬರೆಯುತ್ತಿದ್ದಾರೆ.

ಅನಂತ್‌ನಾಗ್‌..

ಕನ್ನಡ ಚಿತ್ರರಂಗದಲ್ಲಿ ಏಳು ದಶಕಗಳನ್ನು ಪೂರೈಸಿರುವ ಅನಂತ್‌ ನಾಗ್‌ ಸ್ಯಾಂಡಲ್‌ವುಡ್‌ನ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಂದಿ, ತೆಲುಗು, ಮರಾಠಿ, ಮಲಯಾಳ ಮತ್ತು ಇಂಗ್ಲಿಷ್ ಭಾಷೆಗಳ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯುಳ್ಳ ಇವರು ಪ್ರೊ.ಪಿ.ವಿ.ನಂಜರಾಜ್ ಅರಸ್ ನಿರ್ದೇಶನದ ಸಂಕಲ್ಪ (1973) ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. 

ಶ್ಯಾಮ್ ಬೆನಗಲ್ ಅವರ ಅಂಕುರ್ (1974) ಮೂಲಕ ಗುರುತಿಸಿಕೊಂಡು, ಬಯಲು ದಾರಿ (1976),  ಕನ್ನೇಶ್ವರ ರಾಮ (1977), ನಾ ನಿನ್ನ ಬಿಡಲಾರೆ (1979), ಚಂದನದ ಗೊಂಬೆ (1979), ಬೆಂಕಿಯ ಬಲೆ (1983), ಹೆಂಡ್ತಿಗೆ ಹೇಳಬೇಡಿ (1989), ಗಣೇಶನ ಮದುವೆ (1990), ಗೌರಿ ಗಣೇಶ (1991) ಸಿನಿಮಾಗಳ ಮೂಲಕ ಜನಪ್ರಿಯರಾದರು. ದೂರದರ್ಶನದಲ್ಲಿ ಪ್ರಸಾರಗೊಂಡ ‘ಮಾಲ್ಗುಡಿ ಡೇಸ್‌’ನಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು, ಐದು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ‍ಪಾತ್ರರಾಗಿದ್ದಾರೆ. ಮೂಲತಃ ಹೊನ್ನಾವರದ ಹಂಗಾರಕಟ್ಟೆಯವರು. ಚಿತ್ರರಂಗದಲ್ಲಿ 75 ವರ್ಷಗಳನ್ನು ಪೂರೈಸಿರುವ ಅವರಿಗೆ ‘ಪದ್ಮ ಪ್ರಶಸ್ತಿ’ ಗೌರವ ಸಲ್ಲಬೇಕೆಂಬ ಅಭಿಮಾನಿಗಳ ಒತ್ತಾಸೆ ಕೆಲ ವರ್ಷಗಳಿಂದ ಇತ್ತು.

ಹಾಸನ್‌ ರಘು

ಕನ್ನಡ ಚಿತ್ರರಂಗದ ಸ್ಟಂಟ್ ಕಲಾವಿದ, ಸಾಹಸ ನಿರ್ದೇಶಕರಾದ ಕೆ.ಎಚ್‌.ರಘು  ಅವರು ಹಾಸನ್‌ ರಘು ಎಂದೇ ಚಿರಪರಿಚಿತರು. ಕಳರಿಪಟ್ಟು ಸೇರಿ ಹಲವು ಸಮರ ಕಲೆಗಳಲ್ಲಿ ಪರಿಣತಿ ಹೊಂದಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ನಲ್ಲಿ ಜಿಮ್ನಾಸ್ಟಿಕ್‌ ಎನ್‌ಐಎಸ್‌ ಪದವಿ ಪಡೆದಿದ್ದಾರೆ. ಭಾರತೀಯ ಸೇನಾ ಪಡೆಯಲ್ಲಿಯೂ ಸೇವೆ ಸ್ಲಲಿಸಿದ್ದರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸ್ಟಂಟ್‌ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಆ್ಯಕ್ಸಿಡೆಂಟ್ ಚಿತ್ರದ ‌ಸ್ಟಂಟ್‌ ನಿರ್ದೇಶನಕ್ಕಾಗಿ 1984–85ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದರು.

ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಸಮರ ಕಲೆ ಅಧ್ಯಾಪಕರಾಗಿದ್ದರು. ಸದ್ಯ ಬೆಂಗಳೂರಿನಲ್ಲಿಇ ಸಾಹಸ ಕಲೆ ಶಾಲೆ ನಡೆಸುತ್ತಿದ್ದು, ಆಸಕ್ತರಿಗೆ ಸಮರ ಕಲೆ ಕಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಈಗಿನ ಪ್ರಮುಖ ಸಾಹಸ ಕಲಾವಿದರು ಇವರ ಶಿಷ್ಯಂದಿರು. ಸಾಹಸ ಕಲಾವಿದರ ಸಂಘಟನೆಯ ಅಧ್ಯಕ್ಷರು ಆಗಿದ್ದರು.

ಲಕ್ಷ್ಮೀನಾರಾಯಣ ಸುಬ್ರಮಣಿಯಂ

ಪಿಟೀಲು ವಾದಕ, ಸಂಗೀತಗಾರ, ಸಂಗೀತ ನಿರ್ದೇಶಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರು ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಪರಿಣತರು. ವಾದ್ಯಗೋಷ್ಠಿಗಳಲ್ಲಿ ನುಡಿಸುವ ಕಲಾಭಿಜ್ಞ, ಕಲಾ ಕೌಶಲದ ವಿಧಾನಗಳಿಗೆ ಪ್ರಸಿದ್ಧರು.

ವಿ. ಲಕ್ಷ್ಮೀನಾರಾಯಣ–ಸೀತಾಲಕ್ಷ್ಮಿ ದಂಪತಿಯ ಮಗನಾಗಿ 1947ರ ಜುಲೈ 23ರಂದು ಜನಿಸಿದರು. ತಂದೆಯಿಂದಲೇ ಪಿಟೀಲು ಕಲಿತು ಆರನೇ ವಯಸ್ಸಿಗೇ ಕಛೇರಿ ನೀಡಿದ್ದರು. ಓದಿ ಎಂಬಿಬಿಎಸ್‌ ಮಾಡಿದರೂ ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕ್ಯಾಲಿಫೋರ್ನಿಯಾ ಕಲಾ ಸಂಸ್ಥೆಯಿಂದ ಪದವಿ ಪಡೆದುಕೊಂಡರು.

200 ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಐತಿಹಾಸಿಕ ಆಲ್ಬಂಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಮೀರಾ ನಾಯರ್ ನಿರ್ದೇಶನದ ‘ಸಲಾಮ್ ಬಾಂಬೆ’, ಮತ್ತು ‘ಮಿಸಿಸಿಪ್ಪಿ ಮಸಾಲಾ’ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದರು. ಬರ್ನಾರ್ಡೊ ಬೆರ್ಟೊಲುಸ್ಸಿಯ ‘ಲಿಟಲ್ ಬುದ್ಧ’, ಮರ್ಚೆಂಟ್-ಐವರಿ ಪ್ರೊಡಕ್ಷನ್ಸ್‌ನ ‘ಕಾಟನ್ ಮೇರಿ’ ಚಲನಚಿತ್ರಗಳಲ್ಲಿ ಪಿಟೀಲು ವಾದಕರಾಗಿದ್ದರು.

ಮದ್ರಾಸ್‌ನ ರಾಜ್ಯಪಾಲರಿಂದ ಪಿಟೀಲು ಸಾಮ್ರಾಟ ಬಿರುದು, ನಾರ್ವೆ ಬ್ರಾಡ್ ಕ್ಯಾಸ್ಟಿಂಗ್ ಕಾರ್ಪೊರೇಷನ್‌ನ ಎನ್‌ಆರ್‌ಕೆ ಪಿ2 ರೇಡಿಯೊ ಚಾನೆಲ್‌ನಿಂದ ಅತ್ಯುತ್ತಮ ರಚನಕಾರ ಪ್ರಶಸ್ತಿ, ನೇಪಾಳದ ದೊರೆ ಬೀರೇಂದ್ರ ಅವರಿಂದ ಗೌರವ ಪದಕ, 1988ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ಪಡೆದಿರುವ ಅವರು ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಿೆಿಕ ಕೇಜ್

ಬೆಂಗಳೂರಿನಲ್ಲಿ ನೆಲೆಸಿರುವ ರಿಕಿ ಕೇಜ್ ಅವರು ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಕೆರೊಲಿನಾದಲ್ಲಿ ಜನಿಸಿದ ಅವರು, ಎಂಟನೆ ವರ್ಷದಲ್ಲಿ ಹೆತ್ತವರೊಂದಿಗೆ ಬೆಂಗಳೂರಿಗೆ ವಲಸೆ ಬಂದು ಇಲ್ಲಿಯೇ ನೆಲೆಸಿದ್ದಾರೆ. ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರ್ಣಗೊಳಿಸಿ, ಆಕ್ಸ್‌ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತಚಿಕಿತ್ಸಾ ವ್ಯಾಸಂಗವನ್ನು ಪೂರ್ಣಗೊಳಿಸಿದರು. ಆದರೆ, ತಾನು ಕಲಿತ ದಂತ ಚಿಕಿತ್ಸಾ ವೃತ್ತಿಯನ್ನು ಆಯ್ದುಕೊಳ್ಳದೆ, ಸಂಗೀತವನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ಆಯ್ದುಕೊಂಡರು. 

ಹಲವು ಆಲ್ಬಮ್‌ಗಳಿಗೆ ಸಂಗೀತ ನೀಡಿದ ಅವರು, 2008ರಲ್ಲಿ ಕನ್ನಡದ ‘ಆ್ಯಕ್ಸಿಡೆಂಟ್’ ಚಿತ್ರಕ್ಕೆ ಪ್ರಥಮವಾಗಿ ಸಂಗೀತ ನಿರ್ದೇಶಿಸಿದರು. ಬಳಿಕ ವಿವಿಧ ಭಾಷೆಗಳಲ್ಲಿನ ಗೀತೆಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. 2011ರ ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಗೀತೆಗೂ ಸಂಗೀತ ಸಂಯೋಜಿಸಿದ್ದರು. ಇವರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶ–ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ. 

ಪ್ರಶಾಂತ್ ಪ್ರಕಾಶ್

ಬೆಂಗಳೂರಿನವರೇ ಆದ ಪ್ರಶಾಂತ್ ಪ್ರಕಾಶ್‌ ಇಲ್ಲಿನ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಒಯ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಕ್‌ ಸಂಸ್ಕೃತಿ ಭಾರತದಲ್ಲಿನ್ನೂ ಕಣ್ಣುಬಿಡುತ್ತಿದ್ದಾಗ 1995ರಲ್ಲೇ ದೇಶದ ಮೊದಲ ಅನಿಮೇಷನ್‌ ಕಂಪನಿ ‘ವಿಷ್ಯುಯಲ್‌ ರಿಯಾಲಿಟಿ’ ಆರಂಭಿಸಿದ್ದರು. ಅದೇ ದಶಕದಲ್ಲಿ ‘ನೆಟ್‌ಕ್ರಾಫ್ಟ್‌’ ಎಂಬ ತಂತ್ರಾಂಶ ಅಭಿವೃದ್ಧಿ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.

ಯಶಸ್ವಿ ಉದ್ಯಮಿಯಾಗಿ ಬೆಳೆದ ಅವರು ‘ಎಸಿಸಿಇಎಲ್‌’ ಸಂಸ್ಥಾಪಕ ಪ್ರವರ್ತಕರೂ ಹೌದು. ಉದ್ಯಮಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಕಾರ್ಯ, ಶಿಕ್ಷಣ, ಪರಿಸರ, ಸ್ಥಳೀಯ ಸಂಸ್ಕೃತಿ ಮೊದಲಾದ ಕೆಲಸಗಳಲ್ಲಿ ತೊಡಗಿರುವ ಹಲವು ಸಂಸ್ಥೆಗಳ ಸಂಸ್ಥಾಪಕ ಸದಸ್ಯ ಮತ್ತು ಸದಸ್ಯ ಆಗಿದ್ದಾರೆ. ನವೋದ್ಯಮಗಳ ಅಭಿವೃದ್ಧಿಗೆ ಪ್ರಶಾಂತ್ ಅವರ ಕೊಡುಗೆಯನ್ನು ಗಮನಿಸಿದ ಕೇಂದ್ರ ಸರ್ಕಾರವು ಅವರನ್ನು ‘ರಾಷ್ಟ್ರೀಯ ನವೋದ್ಯಮ ಸಲಹಾ ಪರಿಷತ್ತಿನ’ನ ಸದಸ್ಯರಾಗಿ ನೇಮಕ ಮಾಡಿದೆ. ಕರ್ನಾಟಕ ಸರ್ಕಾರದ ‘ಸ್ಟಾರ್ಟ್ಅಪ್ ವಿಷನ್ ಗ್ರೂಪ್‌’ನ ಅಧ್ಯಕ್ಷರೂ ಆಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವಧಿಯಲ್ಲಿ ಸಲಹೆಗಾರರೂ ಆಗಿದ್ದರು.

ಡಾ. ವಿಜಯಲಕ್ಷ್ಮಿ ದೇಶಮಾನೆ

ಕಲಬುರಗಿ ನಗರದ ಕೊಳೆಗೇರಿಯೊಂದರಲ್ಲಿ ಬೆಳೆದ ವಿಜಯಲಕ್ಷ್ಮಿ ದೇಶಮಾನೆ ಅವರಿಗೀಗ ‘ಪದ್ಮಶ್ರೀ’ ಗೌರವ. ದೇಶದ ಸ್ತನ ಕ್ಯಾನ್ಸರ್‌ ಚಿಕಿತ್ಸಾ ಕ್ಷೇತ್ರದಲ್ಲಿನ ಇವರ ಯಶಸ್ಸು ಹೂವಿನ ಹಾದಿಯಾಗಿರಲಿಲ್ಲ. 1955ರಲ್ಲಿ ಜನಿಸಿದ್ದ ವಿಜಯಲಕ್ಷ್ಮೀ ಅವರು ಓದಿನಲ್ಲಿ ಬಹಳ ಚುರುಕಾಗಿದ್ದರು. ಹಾಗಿದ್ದರೂ ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ಹಣವೇ ಇಲ್ಲದೆ, ವೈದ್ಯೆ ಆಗುವ ಕನಸನ್ನೇ ಕೈಬಿಡಬೇಕಾದ ಪರಿಸ್ಥಿತಿಯನ್ನೂ ಎದುರಿಸಿದ್ದರು. ಎಂಬಿಬಿಎಸ್‌ ಮುಗಿಸಿ, ಎಂ.ಎಸ್‌. ಮಾಡಿ ಬಳಿಕ ಕ್ಯಾನ್ಸರ್‌ ತಜ್ಞೆಯಾಗಿ ಖ್ಯಾತಿಗಳಿಸಿದರು.

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಪುರುಷರದ್ದೇ ಪಾರುಪತ್ಯ ಇದ್ದ ಕಾಲದಲ್ಲಿ ವಿಜಯಲಕ್ಷ್ಮೀ ಅವರು ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ನಂತರ ಮುಂಚೂಣಿ ವೈದ್ಯೆಯಾಗಿ ಹೊರಹೊಮ್ಮಿದರು. ಕಿದ್ವಾಯಿ ಸ್ಮಾರಕ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ, ಸಂಸ್ಥೆಯ ಪ್ರಬಾರ ನಿರ್ದೇಶಕಿಯಾಗಿರೂ ವಿವಿಧ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದಾರೆ. 2015ರಲ್ಲಿ ನಿವೃತ್ತರಾಗಿದ್ದಾರೆ.

ಸ್ತನ ಕ್ಯಾನ್ಸರ್‌ ಚಿಕಿತ್ಸೆ, ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ಷೇತ್ರದಲ್ಲಿ ವ್ಯಾಪಕ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ನಿವೃತ್ತಿ ನಂತರವೂ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಿಂಗಳಲ್ಲಿ 15 ದಿನ ರಾಜ್ಯದಗಲ ಸುತ್ತುತ್ತಾ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಮತ್ತು ಗರ್ಭಕಂಠ ಕ್ಯಾನ್ಸರ್‌ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಭೀಮವ್ವ ಶಿಳ್ಳೇಕ್ಯಾತರ

ತಮ್ಮ 14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳಸಿಕೊಂಡ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಈ ಬಾರಿಯ ‘ಪದ್ಮಶ್ರೀ’ ಗೌರವ ಒಲಿದಿದೆ.

ಬಾಲ್ಯದ ದಿನಗಳಲ್ಲಿ ರೂಢಿಯಾದ ತೊಗಲು ಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಇದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಕುಟುಂಬದವರು ಹೇಳುವಂತೆ ಅಜ್ಜಿಗೆ ಈಗ 103ರಿಂದ 104 ವರ್ಷ ವಯಸ್ಸು. ಆದರೆ, ಸರ್ಕಾರಿ ದಾಖಲೆಗಳ ಪ್ರಕಾರ 96. ಅವರ ಪುತ್ರ 75 ವರ್ಷದ ಕೇಶಪ್ಪ ಶಿಳ್ಳೇಕ್ಯಾತರ ಕೂಡ ಇದೇ ಕಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಅನಕ್ಷರಸ್ಥೆಯಾದ ಅಜ್ಜಿ ಕಲೆಯಲ್ಲಿ ಎಲ್ಲರನ್ನೂ ಮೀರಿಸುವ ಕೌಶಲ ಹೊಂದಿದ್ದಾರೆ. ಅಮೆರಿಕ, ಪ್ಯಾರಿಸ್‌, ಇಟಲಿ, ಇರಾನ್‌, ನೆದರ್ಲೆಂಡ್ಸ್‌ ಹೀಗೆ ಅನೇಕ ದೇಶಗಳಲ್ಲಿ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳನ್ನು ಮತ್ತು ಪ್ರಸಕ್ತ ವಿದ್ಯಮಾನಗಳನ್ನು ತಮ್ಮ ಕಲೆಯ ಮೂಲಕ ತೋರಿಸಿದ್ದಾರೆ. 2005–06ರಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ, 2014ರಲ್ಲಿ ರಾಜ್ಯೋತ್ಸವ, 2020–21ನೇ ಸಾಲಿನ ಜಾನಪದ ಶ್ರೀ ಹೀಗೆ ಅನೇಕ ಪ್ರಶಸ್ತಿಗಳು ಬಂದಿವೆ. ಶತಾಯುಷಿಯಾದರೂ ಸ್ವತಂತ್ರವಾಗಿ ಓಡಾಡುತ್ತಾರೆ. ಪ್ರಶಸ್ತಿ ಬಂದಿದೆಯಲ್ಲ ಎನ್ನುವ ಪ್ರಶ್ನೆಗೆ ‘ಕಲೆಗೆ ಗೌರವ ಸಿಕ್ಕಂಗ ಆಗೈತಿ’ ಎಂದು ಸಂತೋಷ ವ್ಯಕ್ತಪಡಿಸಿದರು.

ವೆಂಕಪ್ಪ ಸುಗತೇಕರ

ಬಾಗಲಕೋಟೆ: ಇಲ್ಲಿನ ಜಾನಪದ ಗಾಯಕ ವೆಂಕಪ್ಪ ಸುಗತೇಕರ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

81 ವರ್ಷದ ಸುಗತೇಕರ ಅನಕ್ಷರಸ್ಥರಾಗಿದ್ದು, ಬಾಲ್ಯದಿಂದ ಹಾಡುತ್ತಿದ್ದಾರೆ. ಆಕಾಶವಾಣಿ, ದೂರದರ್ಶನ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿವಿಧ ಉತ್ಸವ, ಸಮ್ಮೇಳನಗಳಲ್ಲಿ ಹಾಡಿದ್ದಾರೆ.

ಒಂದು ಸಾವಿರಕ್ಕೂ ಅಧಿಕ ಗೋಂಧಳಿ (ಜಾನಪದ) ಹಾಡುಗಳನ್ನು ಹಾಡಿದ್ದೂ ಅಲ್ಲದೇ 150ಕ್ಕೂ ಹೆಚ್ಚು ಗೋಂದಳಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಕಥೆಗಳ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಮೂಲೆಗುಂಪಾಗುತ್ತಿರುವ ಗೋಂದಳಿ ಹಾಡುಗಳ ಕುರಿತು ಉಚಿತವಾಗಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ  ತರಬೇತಿ ನೀಡಿದ್ದಾರೆ.

ಜಾನಪದ ಲೋಕಕ್ಕೆ ಸುಗತೇಕರ್ ನೀಡಿದ್ದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದರು. ಈಚೆಗೆ ಹಾವೇರಿಯ ಜಾನಪದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಕರ್ನಾಟಕ ರಾಜ್ಯೋತ್ಸವ, ಜಾನಪದ ಅಕಾಡೆಮಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

‘ದೇವಿ ಆಶೀರ್ವಾದದಿಂದ ಒಳ್ಳೆಯದು ಆಗಿದೆ. ಸೇವಾ ಮಾಡಿದ್ದಕ್ಕೂ ಮನ್ನಣೆ ದೊರೆತಿದೆ. ಗೋಂಧಳಿ ಪದಗಳನ್ನು ಉಳಿಸುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ’ ಎಂದು ಜಾನಪದ ಗಾಯಕ ವೆಂಕಪ್ಪ ಸುಗತೇಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.