ADVERTISEMENT

ತನಿಖೆ ಚುರುಕು, ಪೊಲೀಸ್ ವಶಕ್ಕೆ 7 ಮಂದಿ

ಸುಳ್ವಾಡಿಯಲ್ಲಿ ವಿಷ ಪ್ರಸಾದ ಸೇವನೆ ದುರಂತ: ಆರು ಜನರ ವಿರುದ್ಧ ಎಫ್‌ಐಆರ್‌, ಸ್ವಾಮೀಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ದೇವಾಲಯದ ಆವರಣದಲ್ಲಿ ನೆರೆದಿದ್ದ ಸ್ಥಳೀಯರು
ದೇವಾಲಯದ ಆವರಣದಲ್ಲಿ ನೆರೆದಿದ್ದ ಸ್ಥಳೀಯರು   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ ಸಂಭವಿಸಿದ ದುರಂತ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಭಾನುವಾರ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಹತ್ಯೆಯ ಉದ್ದೇಶವಿಲ್ಲದೆ ಸಂಭವಿಸಿದ ಸಾವು (ಐಪಿಸಿ ಸೆಕ್ಷನ್‌ 304) ಎಂಬ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇವಾಲಯದ ಆಡಳಿತ ಮಂಡಳಿ ಸದಸ್ಯ ಚಿನ್ನಪ್ಪಿ, ದೇವಾಲಯದ ವ್ಯವಸ್ಥಾಪಕ ಮಾದೇಶ, ಪೂಜಾರಿ ಮಾದೇವ ಸೇರಿದಂತೆ ಏಳು ಮಂದಿ ಪೊಲೀಸರ ವಶದಲ್ಲಿದ್ದಾರೆ. ಪೊಲೀಸರು ವಿಚಾರಣೆಇನ್ನಷ್ಟು ತೀವ್ರಗೊಳಿಸಿದ್ದಾರೆ.

ADVERTISEMENT

ಎಫ್‌ಐಆರ್‌: ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ ಮಾರ್ಟಳ್ಳಿಯ ರಾಜಮ್ಮ ಅವರು ದುರಂತ ನಡೆದ ದಿನ (ಡಿ.14) ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರು ಹಾಗೂ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ದೇಗುಲ ಆಡಳಿತ ಮಂಡಳಿ ಸದಸ್ಯ ಚಿನ್ನಪ್ಪಿ, ವ್ಯವಸ್ಥಾಪಕ ಮಹದೇವಸ್ವಾಮಿ ಅಲಿಯಾಸ್‌ ಮಾದೇಶ, ಅಡುಗೆ ಭಟ್ಟರಾದ ಈರಣ್ಣ, ಲೋಕೇಶ್‌, ಪೂಜಾರಿ ಮಾದೇವ, ಮತ್ತೊಬ್ಬ ಅಡುಗೆಭಟ್ಟ ಪುಟ್ಟಸ್ವಾಮಿ ಹಾಗೂ ಇತರ ಆರೋಪಿಗಳು ಎಂದು ಹೆಸರಿಸಲಾಗಿದೆ.

ನಾಲ್ಕು ತಂಡಗಳು: ತನಿಖೆಗಾಗಿ ಕೊಳ್ಳೇಗಾಲ ಡಿವೈಎಸ್‌ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಸರ್ಕಲ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ತಂಡದಲ್ಲಿ 20 ಸಿಬ್ಬಂದಿ ಇದ್ದಾರೆ.

ವಿಚಾರಣೆ: ‘ಯಾರನ್ನೂ ಬಂಧಿಸಿಲ್ಲ, ಏಳು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ. ಈ ಪೈಕಿ ಮೂವರ ಹೆಸರು ಎಫ್‌ಐಆರ್‌ನಲ್ಲಿದೆ. ಉಳಿದ ನಾಲ್ವರು ಹೊರಗಿನವರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಧರ್ಮೇಂದರ್ ಕುಮಾರ್‌ ಮೀನಾ ಹೇಳಿದರು.

ಸಾಲೂರು ಮಠದ ಸ್ವಾಮೀಜಿ ವಿಚಾರಣೆ

ತನಿಖೆಯ ಭಾಗವಾಗಿ ದೇವಾಲಯದ ಆಡಳಿತ ಮಂಡಳಿ ಟ್ರಸ್ಟಿನ ಎಲ್ಲ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ತೀರ್ಮಾನಿಸಿದ್ದು, ಅದರಂತೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ, ಕಿರಿಯ ಸ್ವಾಮೀಜಿ ಹಾಗೂ ಟ್ರಸ್ಟ್‌ ಅಧ್ಯಕ್ಷ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಪೊಲೀಸರು ಭಾನುವಾರ ವಿಚಾರಣೆ ನಡೆಸಿದ್ದಾರೆ.

ತನಿಖಾ ತಂಡದ ನೇತೃತ್ವ ವಹಿಸಿರುವ ಪುಟ್ಟಮಾದಯ್ಯ ಅವರೇ ಒಂದೂವರೆ ಗಂಟೆ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವರಗಳನ್ನು ನೀಡಲುನಿರಾಕರಿಸಿದ್ದಾರೆ.

ದೂರಿನಲ್ಲಿ ಏನಿದೆ?

‘ಓಂ ಶಕ್ತಿಗೆ ಹೋಗಲು ನಮ್ಮ ಊರಿನ ಕೆಲವರು ಮಾಲೆ ಧರಿಸಿದ್ದೆವು. ಡಿ.14ರಂದು ಆಟೊದಲ್ಲಿ ಕಿಚ್ಚುಗುತ್ತು ಮಾರಮ್ಮನ ದೇವಸ್ಥಾನಕ್ಕೆ ಹೋಗಿದ್ದೆವು. ಅಲ್ಲಿ ಭಜನೆ ಮಾಡಿಕೊಂಡು ಇದ್ದೆವು. ಅಲ್ಲಿ ಪರಿಚಯ ಇರುವ, ನಮ್ಮ ಜನಾಂಗದ ಇತರರ ಬಿದರಹಳ್ಳಿ, ವಡಕೆಹಳ್ಳ, ದೊರೆಸ್ವಾಮಿ ಮೇಡು ಹಾಗೂ ಇತರ ಗ್ರಾಮದವರು ಬಂದಿದ್ದರು. ದೇವಸ್ಥಾನದಲ್ಲಿ ಆಯೋಜಕರು ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡು ಅಡುಗೆ ಮಾಡಿದ್ದರು’ ಎಂದು ರಾಜಮ್ಮ ದೂರಿನಲ್ಲಿ ಹೇಳಿದ್ದಾರೆ.

‘ಬೆಳಿಗ್ಗೆ 10.30ಕ್ಕೆ ದೇವಸ್ಥಾನದ ಮ್ಯಾನೇಜರ್‌ ಮಾದೇಶ, ಚಿನ್ನಪ್ಪಿ, ಅಡುಗೆ ಭಟ್ಟ ಈರಣ್ಣ, ಲೋಕೇಶ್‌, ಪೂಜಾರಿ ಮಾದೇವ ಸೇರಿದಂತೆ ಇನ್ನಿತರರು ನಮ್ಮನ್ನು ಹಾಗೂ ಇತರ ಭಕ್ತಾದಿಗಳನ್ನು ಊಟ ಮಾಡಲು ಕರೆದರು. ಊಟ ಮಾಡುವ ಸ್ಥಳಕ್ಕೆ ಹೋದಾಗ ಚಿನ್ನಪ್ಪಿ, ಮಾದೇಶ, ಅಡುಗೆ ಭಟ್ಟ ಈರಣ್ಣ, ಲೋಕೇಶ್‌, ಪೂಜಾರಿ ಮಾದೇವ ಮತ್ತು ಪುಟ್ಟಸ್ವಾಮಿ ಪಾತ್ರೆಯಲ್ಲಿದ್ದ ‌ಬಾತ್ ಅನ್ನು ಪೇಪರ್‌ ಪ್ಲೇಟ್‌ನಲ್ಲಿ ಹಾಕಿ ನಮಗೆ ಹಾಗೂ ಅಲ್ಲಿದ್ದ 75ರಿಂದ 100 ಜನರಿಗೆ ಕೊಟ್ಟರು. ಅದನ್ನು ಎಲ್ಲರೂ ತಿಂದರು. 10 ನಿಮಿಷ ಕಳೆದ ನಂತರ ಎಲ್ಲರಿಗೂ ವಾಂತಿ ಆಯಿತು. ಕೆಲವರು ಸುಸ್ತಾಗಿ ಬಿದ್ದರು. ಕೆಲವರು ನರಳಾಡುತ್ತಿದ್ದರು. ಆಗ ಅಕ್ಕಪಕ್ಕದವರು ಆಂಬುಲೆನ್ಸ್‌ ತರಿಸಿ ಆಸ್ಪತ್ರೆಗೆ ಕಳುಹಿಸಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಶಕ್ಕೆ ಪಡೆಯಲು ಪ್ರಸ್ತಾವ: ಜಿಲ್ಲಾಧಿಕಾರಿ

ಚಾಮರಾಜನಗರ: ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯವನ್ನುವಶಕ್ಕೆ ಪಡೆದುಕೊಳ್ಳಲುಜಿಲ್ಲಾಡಳಿತ ಗಂಭೀರವಾಗಿ ಯೋಚಿಸುತ್ತಿದೆ. ದೇವಾಲಯದ ಆಡಳಿತ ನಿರ್ವಹಣೆಯನ್ನು ಸದ್ಯಕ್ಕೆ 9 ಸದಸ್ಯರ ಟ್ರಸ್ಟ್‌ನೋಡಿಕೊಳ್ಳುತ್ತಿದೆ.

‘ಈ ಬಗ್ಗೆ ಸರ್ಕಾರಕ್ಕೆ ಶೀಘ್ರದಲ್ಲಿ ಪ್ರಸ್ತಾವ ಕಳುಹಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಜನಪ್ರತಿನಿಧಿಗಳ ಆಗ್ರಹ: ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕು ಎಂದು ಹನೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಆಗ್ರಹಿಸಿದ್ದಾರೆ.

ಈ ಕೂಗಿಗೆ ಇನ್ನಷ್ಟು ಬಲ ಬಂದಿದೆ. ಸ್ಥಳೀಯ ಶಾಸಕ ಆರ್‌.ನರೇಂದ್ರ ಕೂಡ ವಿಚಾರ ಪ್ರಸ್ತಾಪಿಸಿದ್ದಾರೆ.

‘ಮುಜರಾಯಿ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ. ದೇವಸ್ಥಾನವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಶಾಸಕ ನರೇಂದ್ರ ಹೇಳುತ್ತಿದ್ದಾರೆ.ನನ್ನ ನಿಲುವು ಕೂಡ ಅದೇ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಿ.ಪುಟ್ಟರಂಗಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸರ್ಕಾರ ಎಡವಿದೆ’
ವಿಷಮಿಶ್ರಿತ ಪ್ರಸಾದ ಸೇವನೆ ಪ್ರಕರಣ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇಲ್ಲಿ ಭಾನುವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾವಿನ ಸಂಖ್ಯೆ ಹೆಚ್ಚಲು ಆರೋಗ್ಯ ಇಲಾಖೆ ವೈಫಲ್ಯವೇ ಕಾರಣ. ಸ್ಥಳೀಯ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿದೆ. ಅಸ್ವಸ್ಥರನ್ನು ಮೈಸೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲು ಬೇಕಾದಷ್ಟು ಆಂಬುಲೆನ್ಸ್‌ಗಳು ಕೂಡಾ ಇರಲಿಲ್ಲ. ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಿದೆ’ ಎಂದರು.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿರುವ ಪರಿಹಾರ ಮೊತ್ತವನ್ನು ₹ 10 ಲಕ್ಷಕ್ಕೆ ಹೆಚ್ಚಿಸಬೇಕು. ದೇವಾಲಯವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಪ ಆಗಿಲ್ಲ: ‘ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಅಸ್ವಸ್ಥರಿಗೆ ಚಿಕಿತ್ಸೆ ಒದಗಿಸುವಲ್ಲಿ ಯಾವುದೇ ಲೋಪ ಸಂಭವಿಸಿಲ್ಲ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಅಸ್ವಸ್ಥರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎಂಬುದು ಸುಳ್ಳು. ಸಾವಿನಲ್ಲಿ ರಾಜಕೀಯ ಮಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.