ADVERTISEMENT

ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ: ಸದನ ಸಮಿತಿಯಿಂದ ತನಿಖೆಗೆ ಒತ್ತಾಯ

l ಪರಿಷತ್ತಿನಲ್ಲಿ ಗದ್ದಲ l ಬಿಜೆಪಿ ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:15 IST
Last Updated 17 ಡಿಸೆಂಬರ್ 2018, 20:15 IST
ವಿಧಾನಪರಿಷತ್ತಿನಲ್ಲಿ ಸೋಮವಾರ ಸಭಾಪತಿಯವರ ಪೀಠದ ಎದುರು ಧರಣಿ ನಡೆಸಿದ ವೇಳೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಪಕ್ಷದ ಸದಸ್ಯರಿಗೆ ಕಾರ್ಯತಂತ್ರದ ಬಗ್ಗೆ ವಿವರಿಸಿದರು
ವಿಧಾನಪರಿಷತ್ತಿನಲ್ಲಿ ಸೋಮವಾರ ಸಭಾಪತಿಯವರ ಪೀಠದ ಎದುರು ಧರಣಿ ನಡೆಸಿದ ವೇಳೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಪಕ್ಷದ ಸದಸ್ಯರಿಗೆ ಕಾರ್ಯತಂತ್ರದ ಬಗ್ಗೆ ವಿವರಿಸಿದರು   

ಬೆಳಗಾವಿ: ಕೊಳವೆಬಾವಿ ಕೊರೆಸಲು ನೆರವು ನೀಡುವ ಗಂಗಾಕಲ್ಯಾಣ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು ಈ ಬಗ್ಗೆ ತನಿಖೆ ಸಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ವಿಧಾನ
ಪರಿಷತ್ತಿನಲ್ಲಿ ಸೋಮವಾರ ಧರಣಿ ನಡೆಸಿದರು.

ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ‘ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅಕ್ರಮ ನಡೆದ ಬಗ್ಗೆ ದೂರುಗಳು ಬಂದಿದ್ದವು. ಅಕ್ರಮ ನಡೆದಿರುವುದು ವಿಚಾರಣೆ
ವೇಳೆ ಸಾಬೀತಾಗಿದ್ದು, 8 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ’ ಎಂದರು.

‘ಒಬ್ಬ ಅಧಿಕಾರಿ ಒಂದು ದಿನಕ್ಕೆ ಹೆಚ್ಚೆಂದರೆ ನಾಲ್ಕು ಕಡೆ ಮಾತ್ರ ಜಲಬಿಂದು ಗುರುತಿಸಬಹುದು. ಆದರೆ, ಈ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಕಡೆ ಜಲಬಿಂದು ಗುರುತಿಸಲಾಗಿದೆ. ಜಲಬಿಂದು ಪ್ರಮಾಣಪತ್ರ ಪಡೆಯದವರಿಗೂ ಹಣ ಪಾವತಿಯಾಗಿದೆ. ಬೋರ್‌ವೆಲ್‌ ಕೊರೆಯದೆಯೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಪಡೆದ ಅನೇಕ ಉದಾಹರಣೆಗಳಿವೆ’ ಎಂದು ಪ್ರಾಣೇಶ್‌, ಅಕ್ರಮಗಳ ಮರ್ಮ ಬಿಚ್ಚಿಟ್ಟರು.

ADVERTISEMENT

‘ಒಂದೇ ತಾಲ್ಲೂಕಿನಲ್ಲಿ 1800ಕ್ಕೂ ಅಧಿಕ ಕೊಳವೆಬಾವಿ ಕೊರೆಸಿದ ಉದಾಹರಣೆ ಇದೆ. ₹ 1.8 ಕೋಟಿ ಲಂಚ ಪಾವತಿಸಲಾಗಿದೆ ಎಂಬ ಆರೋಪವಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳೇ ಈ ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಹಾಗಾಗಿ ಇಲಾಖಾ ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ. ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

‘ಅಕ್ರಮದ ಆರೋಪದ ಬಗ್ಗೆ ಇಲಾಖೆಯಿಂದಲೇ ವಿಚಾರಣೆ ನಡೆಸುತ್ತೇವೆ. ಅದು ವಿರೋಧ ಪಕ್ಷದವರಿಗೆ ತೃಪ್ತಿ ತರದಿದ್ದರೆ, ಬಳಿಕ ಸದನ ಸಮಿತಿ ರಚಿಸೋಣ’ ಎಂದು ಪ್ರಿಯಾಂಕ್ ಹೇಳಿದರು.

ಇದಕ್ಕೆ ಒಪ್ಪದ ವಿರೋಧ ಪಕ್ಷದ ಸದಸ್ಯರು, ‘ಒಂದೋ ಸದನ ಸಮಿತಿ ರಚಿಸಬೇಕು ಅಥವಾ ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಕಲ್ಪಿಸಬೇಕು’ ಎಂದು ಪಟ್ಟು ಹಿಡಿದರು.

ಸಮಿತಿ ರಚಿಸಲು ಸರ್ಕಾರ ಒಪ್ಪದ ಕಾರಣ, ವಿರೋಧ ಪಕ್ಷದವರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ಗದ್ದಲ ಜೋರಾಗಿದ್ದರಿಂದ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಸದನವನ್ನು ಅರ್ಧ ಗಂಟೆ ಮುಂದೂಡಿದರು.

ಸದನ ಮತ್ತೆ ಆರಂಭವಾದಾಗಲೂ ಧರಣಿ ಮುಂದುವರಿಯಿತು. ಈ ವಿಚಾರದಲ್ಲಿ ಅರ್ಧ ಗಂಟೆ ಚರ್ಚೆಗೆ ಬುಧವಾರ ಅವಕಾಶ ಕಲ್ಪಿಸು
ವುದಾಗಿ ಸಭಾಪತಿ ಭರವಸೆ ನೀಡಿದರು. ‌ವಿರೋಧ ಪಕ್ಷದವರು ಧರಣಿ ಕೈ ಬಿಟ್ಟರು.

ವಿಶ್ವಾಸಾರ್ಹತೆ ಕುಸಿತ: ಒಪ್ಪಿದ ಸಚಿವ

ಸಮಾಜ ಕಲ್ಯಾಣ ಇಲಾಖೆಯ ವಿಶ್ವಾಸಾರ್ಹತೆ ಕುಸಿತವಾಗಿದೆ ಎಂದು ಸ್ವತಃ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಒಪ್ಪಿಕೊಂಡರು.

‘ಗಂಗಾಕಲ್ಯಾಣ ಇಲಾಖೆಯಲ್ಲಿ ಅಕ್ರಮ ನಡೆದಿರುವುದನ್ನು ನಾನು ಅಲ್ಲಗಳೆಯುವುದಿಲ್ಲ. ಇಲಾಖೆಯ ವಿಶ್ವಾಸಾರ್ಹತೆ ಕುಸಿದಿರುವುದು ನಿಜ. ಆಗಿರುವ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ

ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರ ಮಕ್ಕಳಿಗೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ.

ಆ ರೈತರ ಮಕ್ಕಳು ಪ್ರವೇಶ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕ, ಹಾಸ್ಟೆಲ್‌ ಶುಲ್ಕ, ವಸತಿ ಶುಲ್ಕದ ಧೃಡೀಕರಿಸಿದ ಪ್ರತಿಗಳನ್ನು ನೀಡಬೇಕು. ತಾಲ್ಲೂಕು ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡ ರೈತರ ದೃಢೀಕರಣ ಪತ್ರದ ಪ್ರತಿಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.