ADVERTISEMENT

‘ಕೋವಿಡ್‌ ಕಾಲದಲ್ಲೂ ರಾಜ್ಯ ನಂಬರ್‌ ಒನ್‌’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 20:16 IST
Last Updated 2 ಫೆಬ್ರುವರಿ 2021, 20:16 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ‘ಕೋವಿಡ್‌ ತಂದಿತ್ತ ಸಂಕಷ್ಟ ಕಾಲದಲ್ಲಿಯೂ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‍ನ ಎಚ್.ಎಂ. ರಮೇಶ್‍ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೈಗಾರಿಕಾ ಸಚಿವನಾಗಿ ನಾನೂ ಕೂಡ ಬಂಡವಾಳ ಹೂಡಿಕೆಯಲ್ಲಿ ಹಿನ್ನಡೆಯಾಗಿದೆ ಎಂದು ಭಾವಿಸಿದ್ದೆ. ಆದರೆ, ಪರಿಸ್ಥಿತಿ ಭಿನ್ನವಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರಗಳ ಇಲಾಖೆ (ಡಿಪಿಐಐಟಿ) ಮಾಹಿತಿ ಪ್ರಕಾರ 2020ರ ಜನವರಿ
ಯಿಂದ ನವೆಂಬರ್‌ವರೆಗೆ ದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಒಟ್ಟು ₹ 3,95,092 ಕೋಟಿ ಬಂಡವಾಳ ಹೂಡಿಕೆ 1,308 ಪ್ರಸ್ತಾವನೆಗಳು ಬಂದಿವೆ. ಈ ಪೈಕಿ, ₹ 1,59,225 ಕೋಟಿ ಬಂಡವಾಳ ಹೂಡಿಕೆಯ 103 ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿವೆ. ಅಂದರೆ, ರಾಜ್ಯದ ಪಾಲು ಶೇ 41ರಷ್ಟು’ ಎಂದರು.

ADVERTISEMENT

‘ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಹಾಗೂ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಮಾರ್ಚ್‍ನಿಂದ ಡಿಸೆಂಬರ್ ನಡುವೆ ₹ 76,480 ಕೋಟಿ ಬಂಡವಾಳ ಹೂಡಿಕೆಯ 1,42,070 ಜನರಿಗೆ ಉದ್ಯೋಗಾವಕಾಶದ 326 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ’ ಎಂದೂ ಶೆಟ್ಟರ್‌ ವಿವರಿಸಿದರು.

‘ಈ ಹಿಂದೆ ನಡೆದ ಹೂಡಿಕೆದಾರರ ಸಮಾವೇಶಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಿರುವ ವಿವಿಧ ಪ್ರಸ್ತಾವನೆಗಳಂತೆ ಕೈಗಾರಿಕೆ ಆರಂಭಿಸಲು ಕಾರ್ಯಪಡೆ ರಚಿಸಲಾಗಿದೆ. ಚೀನಾದಿಂದ ಬಂಡವಾಳ ಹಿಂತೆಗೆದು ಬೇರೆ ಕಡೆ ಹೂಡಿಕೆ ಮಾಡುತ್ತಿರುವ ಕಂಪನಿಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನೂ ರಚಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.