
ಬೆಂಗಳೂರು: ‘ವಿವಾಹಿತ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಕಿರುಕುಳ ತಡೆಯುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆ ಕಾಯ್ದೆಗೆ ಸೇರ್ಪಡೆ ಮಾಡಲಾಗಿರುವ ಕಲಂ 498 ‘ಎ’ ಕಾನೂನುಬದ್ಧವಾಗಿ ವಿವಾಹವಾಗಿರುವ ಪತಿಗೆ ಮಾತ್ರವೇ ಸೀಮಿತವಾಗುವುದಿಲ್ಲ. ಬದಲಿಗೆ, ಮದುವೆಯ ಗುಣ ಲಕ್ಷಣಗಳನ್ನು ಹೊಂದಿ ಬಾಳುವೆ ನಡೆಸುವ ಲಿವ್–ಇನ್ (ಸ್ವ–ಇಚ್ಛಾ ಸಹವಾಸ) ಸಂಬಂಧಗಳಿಗೂ ಅನ್ವಯವಾಗುತ್ತದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ನನ್ನ ಎರಡನೇ ಪತ್ನಿ (ಅರ್ಜಿದಾರರು ಪ್ರತಿಪಾದಿಸಿರುವ ಸ್ವ–ಇಚ್ಛಾ ಸಹವಾಸದಲ್ಲಿದ್ದ) ನನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಮತ್ತು ಇದಕ್ಕೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ 54 ವರ್ಷದ ಹೃದ್ರೋಗ ತಜ್ಞರೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ತಿರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತ ಮಹತ್ವದ ಆದೇಶ ಪ್ರಕಟಿಸಿದೆ.
‘ಈ ಪ್ರಕರಣದಲ್ಲಿ ದೂರುದಾರ 49 ವರ್ಷದ ಮಹಿಳೆ ಮೇಲ್ಮನವಿದಾರರನ್ನು 2010ರ ಅಕ್ಟೋಬರ್ 17ರಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಮೇಲ್ಮನವಿದಾರ ಪತಿ ಇದನ್ನು ಅಲ್ಲಗಳೆದು ಲಿವ್–ಇನ್ ಸಂಬಂಧ ಹೊಂದಿದ್ದಾಗಿ ಪ್ರತಿಪಾದಿಸಿದ್ದಾರೆ. ಅಷ್ಟಕ್ಕೂ ಇಬ್ಬರೂ ಒಟ್ಟಾಗಿ ನೆಲಸಿ, ಸಹಬಾಳ್ವೆಯಿಂದ ನಡೆದುಕೊಂಡಿದ್ದಾರೆ. ಸಾಮಾಜಿಕವಾಗಿ ಪತಿ-ಪತ್ನಿ ಎಂದೇ ಗುರುತಿಸಿಕೊಂಡು ಜವಾಬ್ದಾರಿಗಳನ್ನು ನಿರ್ವಹಿಸಿರುವುದು ಸ್ಪಷ್ಟವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
‘ಇವರಿಬ್ಬರ ಸಂಬಂಧ ಆರು ವರ್ಷಗಳ ನಂತರ ಪರಸ್ಪರ ಕಲಹಗಳ ಪರಿಣಾಮ ಹದಗೆಟ್ಟಿದೆ. ಮೇಲ್ಮನವಿದಾರ ವೈದ್ಯರು ಎರಡನೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಕೆಯನ್ನು ಕೊಲೆ ಮಾಡಲು ಯತ್ನಿಸಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ, ಪತಿ-ಪತ್ನಿ ಹೊಂದಾಣಿಕೆಯನ್ನು ತೆರೆದಿಡುವ ಇಂತಹ ಸಂಬಂಧಗಳಲ್ಲೂ ಕ್ರೌರ್ಯ ಎಸಗಿರುವುದು ಸಾಬೀತಾದಲ್ಲಿ ಭಾರತೀಯ ದಂಡ ಸಂಹಿತೆ–1860ರ ಕಲಂ 498(ಎ) ಅಡಿ ಶಿಕ್ಷೆ ದೊರೆಯಲಿದೆ. ಈ ರೀತಿಯ ಆರೋಪ ಹೊತ್ತ ಪ್ರಕರಣಗಳಲ್ಲಿ ಕಾನೂನುಬದ್ಧ ಪತಿ–ಪತ್ನಿಯ ಸಂಬಂಧ ಹೊಂದಿರಲೇಬೇಕೆಂಬ ಅವಶ್ಯಕತೆ ಇಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಅರ್ಜಿದಾರರಾದ ವೈದ್ಯ ಮೊದಲ ಮದುವೆಯನ್ನು ಮರೆ ಮಾಚಿ ದೂರುದಾರ ಮಹಿಳೆಯ ಜೊತೆ ಒಟ್ಟಾಗಿ ವಾಸ ಮಾಡಿರುವುದು ತಿಳಿದು ಬರುತ್ತದೆ. ದೂರುದಾರ ಮಹಿಳೆ ಕಾನೂನುಬದ್ಧವಾಗಿ ಮದುವೆ ಆಗಿದ್ದೇನೆಂಬ ನಂಬಿಕೆಯಲ್ಲಿದ್ದವರು. ಆದರೆ, ಈ ಮದುವೆ ಅನೂರ್ಜಿತ ಎಂಬುದು ಆಕೆಯ ಪತಿಗೆ ಮಾತ್ರ ಗೊತ್ತಿದ್ದಂತಹ ಸಂಗತಿ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪದ ಸ್ವರೂಪವು ಕಲಂ 498 ‘ಎ’ ವ್ಯಾಪ್ತಿಗೆ ಒಳಪಡಲಿದೆ ಮತ್ತು ಈ ಪ್ರಕರಣದಲ್ಲಿನ ಕ್ರೌರ್ಯದ ಆರೋಪವನ್ನು ಅನೂರ್ಜಿತ ಮದುವೆ ಎಂಬ ಸಬೂಬಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.
‘ಮೇಲ್ಮನವಿದಾರರು ದೂರುದಾರ ಮಹಿಳೆಯ ಕುಟುಂಬದಿಂದ ಹೇರಳ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿರುವ ಆರೋಪವೂ ಇದೆ. ಇದಕ್ಕಾಗಿ ದೂರುದಾರ ಮಹಿಳೆಗೆ ಮತ್ತಷ್ಟು ಹಣದ ಬೇಡಿಕೆಯಿಟ್ಟು ಕಿರುಕುಳ ನೀಡಿ ಹಿಂಸೆಗೆ ಒಳಪಡಿಸಲಾಗಿದೆ. ಇದೇ ಕಾರಣದಿಂದ ದೂರುದಾರ ಎರಡನೇ ಪತ್ನಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಈ ಅಂಶಗಳು ನ್ಯಾಯಪೀಠದ ಮುಂದಿರುವಾಗ ಮೇಲ್ಮನವಿದಾರ ದೂರುದಾರರನ್ನು ಕಾನೂನುಬದ್ಧವಾಗಿ ವಿವಾಹವಾಗಿಲ್ಲ ಎಂಬ ವಾದ ಅಂಗೀಕರಿಸಿದರೆ ಅದು ಅನ್ಯಾಯ ಮಾಡಿದಂತಾಗುತ್ತದೆ’ ಎಂದು ನ್ಯಾಯಪೀಠ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.