ADVERTISEMENT

ಐಆರ್‌ಒಗಳಿಂದ ಸ್ವಾಯತ್ತತೆಗೆ ಧಕ್ಕೆ ಆಗದು: ಕೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 18:43 IST
Last Updated 1 ಅಕ್ಟೋಬರ್ 2020, 18:43 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಪರಿಸರ ಮತ್ತು ಅರಣ್ಯ ಸಚಿವಾಲಯವು(ಎಂಒಇಎಫ್‌) ದೇಶದ 19 ಕಡೆ ಸ್ಥಾಪಿಸುತ್ತಿರುವ ಸಮಗ್ರ ಪ್ರಾದೇಶಿಕ ಕಚೇರಿಗಳಿಂದ (ಐಆರ್‌ಒ) ಸ್ವಾಯತ್ತ ಸಂಸ್ಥೆಗಳ ಕಾರ್ಯವೈಖರಿಗೆ ಧಕ್ಕೆ ಆಗುವುದಿಲ್ಲ’ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಾದೇಶಿಕ ಕಚೇರಿಗಳನ್ನು ತೆರೆಯುವ ಕುರಿತು ಆಗಸ್ಟ್ 13ರಂದು ಎಂಒಇಎಫ್‌ ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಎಂಜಿನಿಯರ್‌ ಗಿರಿಧರ್ ಕುಲಕರ್ಣಿ, ‘ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಎಂದು ಹೇಳಲಾಗಿದ್ದರೂ, ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ), ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ), ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜಡ್‌‌ಎ) ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ದಳ (ಡಬ್ಲ್ಯೂಸಿಸಿಬಿ) ಎಂಬ ನಾಲ್ಕು ಘಟಕ ಉದ್ದೇಶವನ್ನೇ ಈ ಅಧಿಸೂಚನೆ ಬುಡಮೇಲು ಮಾಡಲಿದೆ’ ಎಂದು ತಿಳಿಸಿದ್ದಾರೆ.

‘ಸಮಗ್ರ ಹಣಕಾಸು ವಿಭಾಗದ ಒಪ್ಪಿಗೆ ನಂತರವೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಹುದ್ದೆಗಳನ್ನು ರಚನೆ ಮಾಡಿಲ್ಲ. ಸ್ವಾಯತ್ತ ಸಂಸ್ಥೆಗಳ ಅಧಿಕಾರದ ಮೇಲೆ ಹಿಡಿತ ಹೊಂದುವ ಉದ್ದೇಶ ಹೊಂದಿಲ್ಲ’ ಎಂದು ಎಂಒಇಎಫ್ ಪರ ವಕೀಲರು ತಿಳಿಸಿದರು.

ADVERTISEMENT

ಈ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.