ADVERTISEMENT

ಇಸ್ಕಾನ್‌: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 20:15 IST
Last Updated 16 ಜೂನ್ 2022, 20:15 IST
   

ಬೆಂಗಳೂರು: ‘ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಇಸ್ಕಾನ್ ಸಂಸ್ಥೆ ಒತ್ತುವರಿ ಮಾಡಿದೆ ಎನ್ನಲಾದ 33.17 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನಿಮ್ಮ ನಿಲುವು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಮಹದೇವಪುರ ಗ್ರಾಮದ ನಿವಾಸಿಗಳಾದ ನಾಗೇಂದ್ರ ಮತ್ತು ಎಂ.ಎಸ್. ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರಕರಣವೇನು?:‘ಇಸ್ಕಾನ್ ಸಂಸ್ಥೆ ಒತ್ತುವರಿ ಮಾಡಿರುವ ಜಮೀನು ಗೋಮಾಳ. ಆದ್ದರಿಂದ, ಒತ್ತುವರಿಯಾಗಿರುವ 33 ಎಕರೆ ಜಮೀನು ವಶಕ್ಕೆ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

‘ಇಸ್ಕಾನ್ ಸಂಸ್ಥೆಯು ಮಹದೇವಪುರ ಗ್ರಾಮದ ಸರ್ವೇ 411ರಲ್ಲಿ ಒಟ್ಟು 77 ಎಕರೆ ಜಮೀನನ್ನು ಖರೀದಿಸಿದೆ. ಇದೇ ಸರ್ವೇ ನಂಬರ್‌ನಲ್ಲಿರುವ 33.17 ಎಕರೆ ಸರ್ಕಾರಿ ಜಮೀನನ್ನೂ ಇಸ್ಕಾನ್ ಒತ್ತುವರಿ ಮಾಡಿದೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಈಗಾಗಲೇ ಸ್ಥಳೀಯಾಡಳಿತ ನೋಟಿಸ್ ನೀಡಿದೆ. ಭೂ ಕಬಳಿಕೆ ಕುರಿತ ವಿಶೇಷ ನ್ಯಾಯಾಲಯವು ಕೂಡ ಈ ಜಾಗದಲ್ಲಿ ಇಸ್ಕಾನ್ ಅಳವಡಿಸಿರುವ ತಂತಿಬೇಲಿಯನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.