ADVERTISEMENT

ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನೆಗೆ ಇಸ್ರೊ ಆದ್ಯತೆ: ಎಸ್‌. ಸೋಮನಾಥ್‌

ಆರ್‌ಆರ್‌ಐ ಅಮೃತ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:23 IST
Last Updated 7 ನವೆಂಬರ್ 2022, 20:23 IST
ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಮಾಜಿ ಪ್ರಾಧ್ಯಾಪಕ ಪ್ರೊ. ರಾಜಾರಾಂ ನಿತ್ಯಾನಂದ (ಬಲತುದಿ) ಅವರಿಗೆ ಹಸ್ತಲಾಘವ ಮಾಡಿದರು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್, ಆರ್‌ಆರ್‌ಐ ಅಧ್ಯಕ್ಷ ಪ್ರೊ. ತರುಣ್‌ ಸೌರದೀಪ್‌, ಇಸ್ರೊ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್‌ ಇದ್ದರು. –ಪ್ರಜಾವಾಣಿ ಚಿತ್ರ
ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಮಾಜಿ ಪ್ರಾಧ್ಯಾಪಕ ಪ್ರೊ. ರಾಜಾರಾಂ ನಿತ್ಯಾನಂದ (ಬಲತುದಿ) ಅವರಿಗೆ ಹಸ್ತಲಾಘವ ಮಾಡಿದರು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್, ಆರ್‌ಆರ್‌ಐ ಅಧ್ಯಕ್ಷ ಪ್ರೊ. ತರುಣ್‌ ಸೌರದೀಪ್‌, ಇಸ್ರೊ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್‌ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಾಹ್ಯಾಕಾಶದಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಂದಿನ ದಿನಗಳಲ್ಲಿ ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಲಿದೆ.

ಸೋಮವಾರ ನಗರದಲ್ಲಿ ನಡೆದ ರಾಮನ್‌ ಸಂಶೋಧನಾ ಸಂಸ್ಥೆಯ(ಆರ್‌ಆರ್‌ಐ) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೊ ಅಧ್ಯಕ್ಷಎಸ್‌. ಸೋಮನಾಥ್‌, ‘ಇದುವರೆಗೆ ಉಪಗ್ರಹಗಳ ನಿರ್ಮಾಣ, ಉಡಾವಣೆ, ನಿರ್ವಹಣೆ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳನ್ನು ಇಸ್ರೊ ಕೈಗೊಂಡಿದೆ.ಈ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದ್ದು,ಸರ್ಕಾರದ ಸೂಚನೆಯಂತೆ ಬದಲಾವಣೆಗಳನ್ನು ತರಲಾಗುತ್ತಿದೆ' ಎಂದು ತಿಳಿಸಿದರು.

‘ಇಸ್ರೊದ ನಿಯಮಿತ ಕಾರ್ಯಚಟುವಟಿಕೆ ಕೈಗೊಳ್ಳಲು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ‘ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಎಲ್‌) ಸ್ಥಾಪಿಸಲಾಗಿದೆ’ ಎಂದರು.

ADVERTISEMENT

‘ಇಸ್ರೊ ಕೈಗೊಳ್ಳಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಮುಂದಿನ ದಿನಗಳಲ್ಲಿ ಭಾರಿ ಬದಲಾವಣೆಗಳನ್ನು ತರಲಿದೆ. ಈ ಕಾರ್ಯದಲ್ಲಿರಾಮನ್‌ ಸಂಶೋಧನಾ ಸಂಸ್ಥೆಯಂತಹ ಮಹತ್ವದ ವೈಜ್ಞಾನಿಕ ಸಂಸ್ಥೆಗಳು ಕೈಜೋಡಿಸಬೇಕು. ಈ ಮೂಲಕ ವಿಜ್ಞಾನದ ಮೂಲ ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.ಇಸ್ರೊ ಅಭಿವೃದ್ಧಿಪಡಿಸಿರುವ ಅತ್ಯುತ್ತಮ ಪ್ರಯೋಗಾಲಯಗಳನ್ನು ವಿಜ್ಞಾನಿಗಳು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ವರ್ಚುವಲ್‌ ವ್ಯವಸ್ಥೆ ಮೂಲಕ ರಾಮನ್‌ ಸಂಶೋಧನಾ ಸಂಸ್ಥೆ ನಡೆದು ಬಂದ ದಾರಿ ಮತ್ತು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಸಂಶೋಧನಾ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಶ್ರೀವರಿ ಚಂದ್ರಶೇಖರ್‌ ವಿಶ್ಲೇಷಿಸಿದರು.

‘ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ರಾಮನ್‌ ಸಂಶೋಧನಾ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಭವಿಷ್ಯದಲ್ಲಿಯೂ ಭಾರತೀಯ ವಿಜ್ಞಾನ ಕ್ಷೇತ್ರದ ಹಿರಿಮೆಯನ್ನು ಈ ಸಂಸ್ಥೆ ಹೆಚ್ಚಿಸುವ ವಿಶ್ವಾಸವಿದೆ’ ಎಂದರು.

‘ಆರೋಗ್ಯ ಕ್ಷೇತ್ರ ಸೇರಿ ಸಮಾಜಕ್ಕೆ ನೇರ ಪ್ರಯೋಜನವಾಗುವ ಸಂಶೋಧನಾ ಕಾರ್ಯಗಳನ್ನು ಆರ್‌ಆರ್‌ಐ ಕೈಗೊಳ್ಳಬೇಕು. ಈ ಮೂಲಕಸಂಶೋಧನೆ ಮತ್ತು ಆವಿಷ್ಕಾರದ ಕ್ಷೇತ್ರದಲ್ಲಿ ಆರ್‌ಆರ್‌ಐ ಜಾಗತಿಕ ಕೇಂದ್ರವಾಗಬೇಕು’ ಎಂದು ಹೇಳಿದರು.

ಆರ್‌ಆರ್‌ಐ ನಿರ್ದೇಶಕ ಪ್ರೊ. ತರುಣ್‌ ಸೌರದೀಪ್‌ ಮಾತನಾಡಿ, ’ಸಂಸ್ಥೆಗೆ ಸುದೀರ್ಘ ಇತಿಹಾಸವಿದೆ. ಈ ಬುನಾದಿ ಮೇಲೆ ಹೊಸ ಭವಿಷ್ಯವನ್ನು ನಿರ್ಮಿಸಬೇಕಾಗಿದೆ’ ಎಂದರು.

ಆರ್‌ಆರ್‌ಐನ ಮಾಜಿ ಪ್ರಾಧ್ಯಾಪಕ ಪ್ರೊ. ರಾಜಾರಾಮ್‌ ನಿತ್ಯಾನಂದ ಅವರು, ಸಂಸ್ಥೆಯು ಬೆಳೆದ ಬಂದ ದಾರಿ ಮತ್ತು ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಸಿ.ವಿ. ರಾಮನ್ ಸಂಸ್ಥೆಗೆ ಅಮೃತ ಮಹೋತ್ಸವ
ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್‌ ಅವರು 1948ರಲ್ಲಿ ಸ್ಥಾಪಿಸಿರುವರಾಮನ್‌ ಸಂಶೋಧನಾ ಸಂಸ್ಥೆ ಇದೀಗ 75ನೇ ವರ್ಷಕ್ಕೆ ಕಾಲಿರಿಸಿದೆ. ಭೌತ ವಿಜ್ಞಾನದ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳನ್ನು ಈ ಸಂಸ್ಥೆ ನಿರಂತರವಾಗಿ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1971ರಿಂದ ಈ ಸಂಸ್ಥೆಗೆ ಅನುದಾನ ಒದಗಿಸುತ್ತಿದೆ.

ಅಮೃತ ಮಹೋತ್ಸವ ಅಂಗವಾಗಿ ಇಡೀ ಒಂದು ವರ್ಷದ ಅವಧಿಯಲ್ಲಿ ಐದು ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನಗಳು ಮತ್ತು ಭಾರತೀಯ ಮಹಿಳಾ ವಿಜ್ಞಾನಗಳ ಕುರಿತಾದ ಒಂದು ರಾಷ್ಟ್ರೀಯ ಸಮ್ಮೇಳನ ಹಾಗೂ ಉಪನ್ಯಾಸ ಸರಣಿಗಳನ್ನು ಸಂಸ್ಥೆ ಹಮ್ಮಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.