ADVERTISEMENT

‘ತೃತೀಯ ಲಿಂಗಿಗಳಿಗೆ ಮೀಸಲಾತಿ ಜಾರಿಗೆ ಸುತ್ತೋಲೆ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 16:27 IST
Last Updated 22 ಮಾರ್ಚ್ 2022, 16:27 IST

ಬೆಂಗಳೂರು: ಸರ್ಕಾರದ ವಿವಿಧ ಹುದ್ದೆಗಳಲ್ಲಿ ತೃತೀಯ ಲಿಂಗಿಗಳಿಗೆ ಶೇಕಡ 1ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಖ್ಯ ಕಾರ್ಯದರ್ಶಿಯವರ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ತೃತೀಯ ಲಿಂಗಿಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ 1ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಆದರೆ, ಎಲ್ಲ ಇಲಾಖೆಗಳಲ್ಲೂ ಈ ತೀರ್ಮಾನ ಸರಿಯಾಗಿ ಜಾರಿಯಾಗುತ್ತಿಲ್ಲ. ಆದ್ದರಿಂದ ತೃತೀಯ ಲಿಂಗಿಗಳಿಗೆ ನೌಕರಿಯಲ್ಲಿ ಮೀಸಲಾತಿ ನೀಡುವ ತೀರ್ಮಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಲಾಗುವುದು’ ಎಂದರು.

2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 20,266 ಮಂದಿ ತೃತೀಯ ಲಿಂಗಿಗಳಿದ್ದರು. ಆ ಬಳಿಕ ಸಮೀಕ್ಷೆ ನಡೆದಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ನಿಖರ ಅಂಕಿಅಂಶಗಳನ್ನು ಸಂಗ್ರಹಿಸುವುದಕ್ಕಾಗಿ ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸಂಬಾರ ಪಾರ್ಕ್‌ ರದ್ದು: ‘ಹಾವೇರಿ ಜಿಲ್ಲೆಯ ಬ್ಯಾಡಗಿ ಗ್ರಾಮದಲ್ಲಿ 115 ಎಕರೆ 34 ಗುಂಟೆ ವಿಸ್ತೀರ್ಣದಲ್ಲಿ ಸಂಬಾರ ಪಾರ್ಕ್‌ ನಿರ್ಮಿಸುವ ಪ್ರಸ್ತಾವವನ್ನು ರೈತರ ವಿರೋಧದ ಕಾರಣದಿಂದ ಕೈಬಿಡಲಾಗಿದೆ. ಅದೇ ಜಮೀನನ್ನು ಇತರ ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಸ್ತಾವವಿದೆ’ ಎಂದು ಕೈಗಾರಿಕಾ ಸಚಿವರ ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದರಿ ಜಮೀನಿನ ಭೂಸ್ವಾಧೀನಕ್ಕೆ ರೈತರಿಂದ ತೀವ್ರ ವಿರೋಧವಿದೆ. ಸಂಬಾರ ಪಾರ್ಕ್‌ ನಿರ್ಮಾಣಕ್ಕೆ ನಡೆಸಿದ ಟೆಂಡರ್‌ ಪ್ರಕ್ರಿಯೆಯಲ್ಲೂ ಯಾರೂ ಭಾಗವಹಿಸಲಿಲ್ಲ. ತೋಟಗಾರಿಕೆ ಇಲಾಖೆಯೂ ಆಸಕ್ತಿ ತೋರಿಲ್ಲ. ಆದ್ದರಿಂದ ಈ ಯೋಜನೆಯನ್ನೇ ಕೈಬಿಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.